ಉಪ್ಪಳ: ಭೂಮಿಯ ಮೇಲಿನ ಪುಣ್ಯಪ್ರದವಾದ ಮಾನವ ಬದುಕು ವ್ಯರ್ಥವಾಗಿ ಹೋಗಬಾರದು. ಭಗವಂತನ ಅನುಗ್ರಹದೊಂದಿಗೆ ತ್ಯಾಗಮಯಿಯಾಗಿ ಬದುಕಿ ಸರ್ವವನ್ನೂ ಅರ್ಪಿಸಿಕೊಂಡಾಗ ಬದುಕು ಸಾರ್ಥಕತೆ ಪಡೆಯುತ್ತದೆ. ಪ್ರತಿಯೊಬ್ಬನ ಪುಟ್ಟ ಕೈಂಕರ್ಯವೂ ಸಮಾಜದ ಹಿತ ದೃಷ್ಟಿಯಿಂದ ಇರಬೇಕು ಎಂದು ಕೊಂಡೆವೂರು ಸದ್ಗುರು ನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತೀ ಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ಕೊಂಡೆವೂರು ಶ್ರೀಸದ್ಗುರು ನಿತ್ಯಾನಂದ ಯೊಗಾಶ್ರದ ಶ್ರೀಗುರುಪೀಠ ಪ್ರತಿಷ್ಠೆಯ 17ನೇ ವಾರ್ಷಿಕ ದಿನಾಚರಣೆ ಮತ್ತು ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆಯ ಅಂಗವಾಗಿ ಗುರುವಾರ ಆಯೋಜಿಸಲಾದ ಧಾರ್ಮಿಕ ಸಭೆಯಲ್ಲಿ ದಿವ್ಯ ಉಪಸ್ಥಿತರಿದ್ದು ಅವರು ಅನುಗ್ರಹ ಸಂದೇಶ ನೀಡಿದರು.
ಆರಾಧನಾಲಯಗಳು ಧಾರ್ಮಿಕತೆಯ ಜಾಗೃತಿ ಮೂಡಿಸಿದರೆ, ವಿದ್ಯಾಲಯಗಳು ವ್ಯಕ್ತಿಯ ವ್ಯತ್ತಿತ್ವದ ರೂಪುಗೊಳ್ಳುವಿಕೆಯ ಭೂಮಿಕೆಯಾಗಿ ಕಾರ್ಯವೆಸಗುತ್ತದೆ. ಈ ಹಿನ್ನೆಲೆಯಲ್ಲಿ ಸಮಾಜ, ರಾಷ್ಟ್ರ ಮತ್ತು ಜಗತ್ತಿನ ಒಳಿತಿಗಾಗಿ ಸಮರ್ಪಿಸಿಕೊಳ್ಳಬೇಕೆಂಬ ತಮ್ಮ ತುಡಿತ ಯಶಸ್ವಿಯಾಗಿ ಮುನ್ನಡೆದಿದೆ. ಈ ಹಿನ್ನೆಲೆಯಲ್ಲಿ ಬೆನ್ನೆಲುಬಾಗಿ ನಿಂತ ಪ್ರತಿಯೊಬ್ಬ ವ್ಯಕ್ತಿ, ಸಂಸ್ಥೆಗಳ ಬಗ್ಗೆ ಹೆಮ್ಮೆಯಿದೆ ಎಂದು ಶ್ರೀಗಳು ಈ ಸಂದರ್ಭ ತಿಳಿಸಿದರು. ಮನಸ್ಸು, ದೇಹಗಳ ಜೊತೆಗೆ ನಮ್ಮ ಪರಿಸರವೂ ಶುಚಿಯಾಗಿರಬೇಕಾದ ಅನಿವಾರ್ಯತೆ ಇಂದು ಅತಿ ಹೆಚ್ಚಿದೆ. ಈ ನಿಟ್ಟಿನಲ್ಲಿ ಪ್ಲಾಸ್ಟಿಕ್ ಸಹಿತ ಪರಿಸರ ಹಾನಿಕಾರಕ ವಸ್ತುಗಳ ನಿಯಂತ್ರಣ ಮತ್ತು ಮರುಬಳಕೆಯ ನಿಟ್ಟಿನಲ್ಲಿ ಶ್ರೀಮಠ ಶೀಘ್ರ ಹೊಸ ಯೋಜನೆಯೊಂದಕ್ಕೆ ಚಾಲನೆ ನೀಡಲಿದೆ ಎಂದು ಯೋಗಾನಂದ ಸರಸ್ವತೀ ಶ್ರೀಗಳು ಘೋಶಿಸಿದರು.
ಸಮಾರಂಭವನ್ನು ಕೇಂದ್ರ ಆಯುಷ್ ಖಾತೆ ಹಾಗೂ ರಕ್ಷಣಾ ಖಾತೆ ರಾಜ್ಯ ಸಚಿವ ಶ್ರೀಪಾದ ಯಸ್ಸೋ ನಾಯಕ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಸಚಿವರು, ವ್ಯಕ್ತಿಯು ಶಕ್ತಿಯಾಗಿ ಬೆಳೆಯಬೇಕಿದ್ದರೆ ಆಧ್ಯಾತ್ಮದ ತಳಹದಿಯ ಬೆಳ್ಗೊಡೆಯ ಅಗತ್ಯ ಇದೆ. ಸಮಾಜವನ್ನು ಶಕ್ತಿಯುತವಾಗಿ ಮುನ್ನಡೆಸುವಲ್ಲಿ ರಾಷ್ಟ್ರದ ಪೂರ್ವ ಕಾಲದಿಂದಲೂ ಆಧ್ಯಾತ್ಮ, ಸಂತ-ಶರಣರು ಇಂತಹ ಮಾರ್ಗದರ್ಶಿಗಳಾಗಿ ಮುನ್ನಡೆಸಿದ್ದಾರೆ. ಬದುಕಿನಲ್ಲಿ ಗಳಿಸಿಕೊಳ್ಳುವುದಕ್ಕಿಂತಲೂ ತ್ಯಾಗದಿಂದ ಅರ್ಪಿಸಿಕೊಳ್ಳುವ ಗುಣ ಎಂದಿಗೂ ಮಾನ್ಯವಾದುದದಾಗಿದ್ದು, ಕೊಂಡೆವೂರು ಆಶ್ರಮ ಇಂತಹ ವಿರಳಾತಿವಿರಳ ಆಶ್ರಮಗಳಲ್ಲಿ ಒಂದು ಎಂದು ತಿಳಿಸಿದರು. ಪರಿವರ್ತನೆ ಎನ್ನುವುದು ತ್ಯಾಗದಿಂದ ಮಾತ್ರ ಸಾಧ್ಯ ಎಂದ ಸಚಿವರು, ಸ್ಪುಟಗೊಂಡ ಸದ್ಭಾವನೆಗಳು ಆಧ್ಯಾತ್ಮದ ತಳಹದಿಯಲ್ಲಿ ಸರ್ವರ ಒಳಿತಿಗಾಗಿ ಬದುಕುವುದನ್ನು ಕಲಿಸುತ್ತದೆ ಎಂದು ತಿಳಿಸಿದರು. ಕೊಂಡೆವೂರು ನಿತ್ಯಾನಂದ ಯೋಗಾಶ್ರಮವು ತನ್ನ ಪಾಲಿಗೆ ಯಶಸ್ಸಿನ ಸಾಧನೆಗೆ ಕಾರಣವಾದ ಶಕ್ತಿ ಕೇಂದ್ರವಾಗಿದೆ ಎಂದು ಅವರು ಈ ಸಂದರ್ಭ ತಿಳಿಸಿದರು. ಈ ಸಂದರ್ಭ ಶ್ರೀಪಾದ ಎಸ್ಸೋ ನಾಯಕ್ ದಂಪತಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು.
ಕರ್ನಾಟಕ ಬ್ಯಾಂಕ್ ನ ಕಾರ್ಯನಿರ್ವಹಣಾಧಿಕಾರಿ ಹಾಗೂ ನಿರ್ವಾಹಕ ನಿರ್ದೇಶಕ ಮಹಾಬಲೇಶ್ವರ ರಾವ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜವನ್ನು ಶ್ರದ್ದಾ ಕೇಂದ್ರಗಳು ಮಾತ್ರ ಸತ್ ಚಿಂತನೆಯೆಡೆಗೆ ಮುನ್ನಡೆಸುವ ಶಕ್ತಿಹೊಂದಿದೆ. ಎಲ್ಲರ ಸಹಭಾಗಿತ್ವದಲ್ಲಿ ಸಮಾಜಮುಖಿ ಮಠವಾಗಿ ಗುರುತಿಸಿಕೊಂಡಿರುವ ಕೊಂಡೆವೂರು ಆಶ್ರಮ ಈ ಕಾಲಘಟ್ಟಕ್ಕೊದಗಿದ ಪುಣ್ಯ ಎಂದು ತಿಳಿಸಿದರು.
ಮಾಣಿಲ ಶ್ರೀಧಾಮದ ಶ್ರೀಮೋಹನದಾಸ ಪರಮಹಂಸ ಸ್ವಾಮೀಜಿ ಉಪಸ್ಥಿತರಿದ್ದು ಆಶೀರ್ವಚನ ನೀಡಿದರು. ಬೆಂಗಳೂರಿನ ಉದ್ಯಮಿ ವಿ.ಸುಬ್ರಹ್ಮಣ್ಯ, ಕಾಸರಗೋಡು ಜಿಲ್ಲಾ ಪಂಚಾಯತಿ ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್, ಯೋಗಾಶ್ರಮದ ಮುಂಬೈ ಘಟಕದ ಗೌರವ ಕಾರ್ಯದರ್ಶಿ ಅಶೋಕ ಕೋಟ್ಯಾನ್, ಉದ್ಯಮಿ ಸೀತಾರಾಮ ಶೆಟ್ಟಿ ನೆತ್ತಿಲಬಾಳಿಕೆ, ವಿಹಿಂಪದ ಮುಖಂಡ ಪ್ರೊ.ಎಂ.ಬಿ.ಪುರಾಣಿಕ್, ಮುಖಂಡ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ, ಡಾ.ನಾರಾಯಣ ಉಪಸ್ಥಿತರಿದ್ದು ಶುಭಹಾರೈಸಿದರು. ಶ್ರೀಮತಿ. ವಿಜಯ ಎಸ್ಸೋ ನಾಯಕ್, ವಿವೇಕ್ ಆಳ್ವ ಮೂಡಬಿದ್ರೆ ಉಪಸ್ಥಿತರಿದ್ದರು.
ಡಾ.ಆಶಾಜ್ಯೋತಿ ರೈ ಸನ್ಮಾನ ಪತ್ರ ವಾಚಿಸಿದರು. ಕೇಂದ್ರ ಸಚಿವ ಶ್ರೀಪಾದ ಎಸ್ಸೋ ನಾಯಕ್ ಅವರಿಗೆ ಕರ್ನಾಟಕ ಬ್ಯಾಂಕ್ ಪರವಾಗಿ ಮಹಾಬಲೇಶ್ವರ ರಾವ್ ಸನ್ಮಾನಿಸಿದರು. ಜೊತೆಗೆ ವಿವಿಧ ಸಮಾಜದ ಪರವಾಗಿ ಅನಂತಪದ್ಮನಾಭ ಐಲ, ಮಂಜುನಾಥ ಡಿ.ಮಾನ್ಯ, ಮಧುಸೂದನ, ಎಂ.ವಿ.ಶರವಣನ್ ಮಂಗಳೂರು, ಗೋಪಾಲ ಚೆಟ್ಟಿಯಾರ್ ಅವರು ಸನ್ಮಾನಿಸಿ ಗೌರವಿಸಿದರು.ಈ ಸಂದರ್ಭ ಕಾಲ್ನಡಿಗೆಯಲ್ಲಿ ಐತಿಹಾಸಿಕ ಭಾರತ ಪರಿಕ್ರಮ ಯಾತ್ರೆ ಕೈಗೊಂಡ ಸೀತಾರಾಮ ಕೆದಿಲಾಯ ಅವರನ್ನು ಗೌರವಿಸಲಾಯಿತು. ಕರ್ನಾಟಕ ಸರ್ಕಾರದ ಮಾಜಿ ವಿಧಾನ ಪರಿಷತ್ತು ಸದಸ್ಯ ಮೋನಪ್ಪ ಭಂಡಾರಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ನ್ಯಾಯವಾದಿ ಗಂಗಾಧರ ಕೊಂಡೆವೂರು ವಂದಿಸಿದರು. ಪುರುಷೋತ್ತಮ ಭಂಡಾರಿ ಅಡ್ಯಾರ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಗಣಹೋಮ, ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆಗಳು ವೇದಮೂರ್ತಿ ಹರಿನಾರಾಯಣ ಮಯ್ಯ ಕುಂಬಳೆ ಇವರ ನೇತೃತ್ವದಲ್ಲಿ ನೆರವೇರಿತು.