ಕಾಸರಗೋಡು: ನಾಡಿನೆಲ್ಲೆಡೆ ಸೋಮವಾರ ಭಕ್ತಿ ನಿಷ್ಠೆ ಸಡಗರದಿಂದ ನಾಗರ ಪಂಚಮಿ ಆಚರಿಸಲಾಯಿತು. ನಾಡಿನ ಪ್ರಮುಖ ದೇವಾಲಯಗಳಲ್ಲಿ, ಮಂದಿರಗಳಲ್ಲಿ, ನಾಗನ ಬನಗಳಲ್ಲಿ ಭಾರೀ ಸಂಖ್ಯೆಯಲ್ಲಿ ಭಕ್ತಾದಿಗಳು ನಾಗನಿಗೆ ಎಳನೀರು ಮತ್ತು ಕ್ಷೀರಾಭಿಷೇಕ ನಡೆಸಿದರು. ವರ್ಷದ ಮೊದಲ ಹಬ್ಬದ ಸಡಗರ ಎಲ್ಲೆಡೆ ಕಂಡು ಬಂತು. ಪ್ರಕೃತಿಯನ್ನು ಪೂಜಿಸುವ ನಾಗಾರಾಧನೆ ಹೆಣ್ಮಕ್ಕಳಿಗೆ ವಿಶೇಷವಾಗಿದೆ.
ಕಾಸರಗೋಡಿನ ಇತಿಹಾಸ ಪ್ರಸಿದ್ಧ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಸೋಮವಾರ ಬೆಳಿಗ್ಗಿನಿಂದಲೇ ನಾಗನಿಗೆ ಕ್ಷೀರಾಭಿಷೇಕ ಮತ್ತು ಎಳನೀರಿನ ಅಭಿಷೇಕ ಸಮರ್ಪಿಸಲು ಭಕ್ತಾದಿಗಳು ನೆರೆದಿದ್ದರು. ಇದೇ ರೀತಿ ಜಿಲ್ಲೆಯ ಬಹುತೇಕ ದೇವಸ್ಥಾನ, ಮಂದಿರ, ನಾಗಬನಗಳಲ್ಲಿ ದೃಶ್ಯಗಳು ಕಂಡು ಬಂತು. ನಾಗನಿಗೆ ಅಭಿಷೇಕ ಮಾಡುವ ಮೂಲಕ ಭಕ್ತಾದಿಗಳು ಕೃತಾರ್ಥತೆಯ ಭಾವವನ್ನು ಹೊಂದಿದರು.
ಕಾಸರಗೋಡು ಬ್ಯಾಂಕ್ ರಸ್ತೆಯಲ್ಲಿರುವ ನಾಗರಾಜ ಕಟ್ಟೆಯಲ್ಲಿ ನಾಗನಿಗೆ ಹಾಲನ್ನೆರೆಯಲು ಭಾರೀ ಸಂಖ್ಯೆಯಲ್ಲಿ ಭಕ್ತಾದಿಗಳು ಬೆಳಗ್ಗಿನಿಂದಲೇ ಸರದಿಯಲ್ಲಿ ನಿಂತಿದ್ದರು.
ಕಾಸರಗೋಡು ನಗರದ ಎಸ್.ವಿ.ಟಿ. ರಸ್ತೆಯಲ್ಲಿರುವ ನಾಗನ ಕಟ್ಟೆಯಲ್ಲಿ ಭಕ್ತಾದಿಗಳು ಅಭಿಷೇಕ ಮಾಡಿದರು. ನೆಲ್ಲಿಕುಂಜೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ನೆಲ್ಲಿಕುಂಜೆ ಕೋಮರಾಡಿ ದೈವಸ್ಥಾನದ ನಾಗನಿಗೆ ಹಾಲನ್ನೆರೆಯಲು ಭಾರೀ ಸಂಖ್ಯೆಯಲ್ಲಿ ಭಕ್ತಾದಿಗಳು ನೆರೆದಿದ್ದು, ವಿಶೇಷ ಪೂಜೆ ಪುನಸ್ಕಾರ ನಡೆಸಿದರು. ಹಲವೆಡೆ ನಾಗತಂಬಿಲ ನಡೆಯಿತು.
(ಸಮರಸ ಚಿತ್ರ ಮಾಹಿತಿ: (1) ಇತಿಹಾಸ ಪ್ರಸಿದ್ಧ ಕಾಸರಗೋಡು ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ನಾಗನಿಗೆ ಕ್ಷೀರಾಭಿಷೇಕ, 2) ಬ್ಯಾಂಕ್ ರಸ್ತೆಯ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ಸಮೀಪದ ನಾಗರಾಜ ಕಟ್ಟೆಯಲ್ಲಿ ಎಳನೀರು ಅಭಿಷೇಕ, 3) ನಗರದ ಎಸ್.ವಿ.ಟಿ. ರಸ್ತೆಯಲ್ಲಿರುವ ನಾಗನಕಟ್ಟೆಯಲ್ಲಿ ಕ್ಷೀರಾಭಿಷೇಕ, 4) ನೆಲ್ಲಿಕುಂಜೆಯ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಗರಪಂಚಮಿ, 5) ನೆಲ್ಲಿಕುಂಜೆಯ ಕೋಮರಾಡಿ ದೈವಸ್ಥಾನದಲ್ಲಿ ನಾಗನಿಗೆ ವಿವಿಧ ಅಭಿಷೇಕ ನಡೆಯಿತು.)