ಕುಂಬಳೆ: ಭಾಷಾ ಅಲ್ಪಸಂಖ್ಯಾತ ಪ್ರದೇಶ ಕಾಸರಗೋಡು - ಮಂಜೇಶ್ವರ ತಾಲೂಕು ವ್ಯಾಪ್ತಿಯ ಸರ್ಕಾರಿ ಕಚೇರಿಗಳಲ್ಲಿ ವಿವಿಧ ಹುದ್ದೆಗಳಿಗೆ ಕನ್ನಡ ಬಲ್ಲ ಉದ್ಯೋಗಾರ್ಥಿಗಳಿಗೆ ನೇಮಕ ಮಾಡಬೇಕೆಂಬ ಆದೇಶವಿದ್ದರೂ ಅದನ್ನು ಇಲ್ಲಿನ ಮಲಯಾಳಿ ಅಧಿಕಾರಿಗಳು ಮರೆಮಾಚಿ ಮಲಯಾಳಿಗಳನ್ನು ತುರುಕಿಸುವ ಮೂಲಕ ಕನ್ನಡಿಗರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದಾರೆಂದು ಕನ್ನಡ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಭಾಸ್ಕರ ಕಾಸರಗೋಡು ಅಭಿಪ್ರಾಯಪಟ್ಟರು.
ಕುಂಬಳೆ ಮಾಧವ ಪೈ ಹಾಲ್‍ನಲ್ಲಿ ಇತ್ತೀಚೆಗೆ ನಡೆದ ಕನ್ನಡ ಉದ್ಯೋಗಾರ್ಥಿಗಳ ಮಾಹಿತಿ ಶಿಬಿರದಲ್ಲಿ ಅವರು ಮಾತನಾಡಿದರು.
ನಮ್ಮ ಹಕ್ಕುಗಳನ್ನು ಪಡೆಯಲು ಹೋರಾಟದೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕೇರಳ ರಾಜ್ಯ ಲೋಕಸೇವಾ ಆಯೋಗ ಇಲಾಖೆ ನಡೆಸುವ ಪರೀಕ್ಷೆಗಳಲ್ಲಿ ಭಾಗವಹಿಸಬೇಕೆಂದು ಅವರು ತಿಳಿಸಿದರು.
ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದ ನಿವೃತ್ತ ಅಧಿಕಾರಿ ಎಂ.ಸೀತಾರಾಮ ಆಚಾರ್ಯ ಸರ್ಕಾರದ ವಿವಿಧ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಉದ್ಯೋಗದ ಬಗ್ಗೆ ಕೇರಳ ಲೋಕ ಸೇವಾ ಆಯೋಗದ ನುರಿತರಿಂದ ಸಮಗ್ರವಾದ ಮಾಹಿತಿಯನ್ನು ನೀಡಲಾಯಿತು.