ಬೀಜಿಂಗ್:370ನೇ ವಿಧಿ ರದ್ದುಗೊಳಿಸಿ ಜಮ್ಮು ಕಾಶ್ಮೀರ ಹಾಗೂ ಲಡಾಖ್ ಗಳನ್ನು ಕೇಂದ್ರಡಳಿತ ಪ್ರದೇಶ ಎಂದು ಘೋಷಿಸಿರುವ ಭಾರತದ ಕ್ರಮವನ್ನು ಚೀನಾ ಖಂಡಿಸಿದೆ. ಭಾರತವು ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸುವುದನ್ನು ಚೀನಾ ಆಕ್ಷೇಪಿಸಿದ್ದು ಈ ಕ್ರಮವು ತನ್ನ "ಪ್ರಾದೇಶಿಕ ಸಾರ್ವಭೌಮತ್ವ" ಕ್ಕೆ ವಿರುದ್ಧವಾಗಿದೆ ಮತ್ತು ಭಾರತವು "ಎಚ್ಚರಿಕೆ ವಹಿಸುವಂತೆ" ಕೇಳಿದೆ. ಅಲ್ಲದೆ ಭಾರತವು ಪ್ರಸ್ತುತ ಗಡಿ ಸಮಸ್ಯೆಯನ್ನು ಇನ್ನಷ್ಟು "ಸಂಕೀರ್ಣಗೊಳಿಸಬಾರದು" ಎಂದು ಹೇಳಿದೆ.
"ಚೀನಾ-ಭಾರತ ಗಡಿಯ ಪಶ್ಚಿಮ ಭಾಗದಲ್ಲಿರುವ ಚೀನಾದ ಭೂಪ್ರದೇಶವನ್ನು ಭಾರತದ ಆಡಳಿತ ವ್ಯಾಪ್ತಿಗೆ ತರುವುದನ್ನು ಚೀನಾ ಎಂದಿಗೂ ಒಪ್ಪಿಕೊಳ್ಳುವುದಿಲ್ಲ. ಇತ್ತೀಚಿನ ದಿನಗಳಲ್ಲಿ, ಭಾರತ ಚೀನಾದ ಪ್ರಾದೇಶಿಕ ಸಾರ್ವಭೌಮತ್ವವನ್ನು ಹಾನಿಗೊಳಿಸುವ ರೀತಿಯಲ್ಲಿ ಏಕಪಕ್ಷೀಯವಾಗಿ ತನ್ನ ದೇಶೀಯ ಕಾನೂನುಗಳನ್ನು ಮಾರ್ಪಡಿಸಿಕೊಳ್ಳುತ್ತಿದ್ದಾರೆ.ಇದು ಸ್ವೀಕಾರಾರ್ಹವಲ್ಲ" ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನೈಂಗ್ ಹೇಳಿದ್ದಾರೆ.
ಭಾರತವು "ಗಡಿ ವಿಷಯದ ಬಗ್ಗೆ ಎಚ್ಚರಿಕೆ ವಹಿಸಬೇಕು, ಎರಡೂ ಕಡೆಯಲ್ಲಿ ಇದಾಗಲೇ ಜಾರಿಯಲ್ಲಿರುವ ಗಡಿ ಸಂಬಂಧಿತ ಒಪ್ಪಂಡಗಳನ್ನು ಕಟ್ಟು ನಿಟ್ತಾಗಿ ಪಾಲಿಸಬೇಕು. ಗಡಿ ಸಮಸ್ಯೆಯನ್ನು ಇನ್ನಷ್ಟು ಸಂಕೀರ್ಣಗೊಳಿಸುವ ಯಾವುದೇ ಕ್ರಮದಿಂದ ದೂರವಿರಬೇಕು" ಎಂದು ಅವರು ಹೇಳಿದರು
ಸೋಮವಾರ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ ಸಂವಿಧಾನದ 370 ನೇ ವಿಧಿಯನ್ನು ರದ್ದುಪಡಿಸಲಾಗಿದೆ.ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ (ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ) ವಿಭಾಗಿಸಿ ಭರತ ಸರ್ಕಾರ ಘೋಷಣೆ ಹೊರಡಿಸಿದೆ.