ಕಾಸರಗೋಡು: ಬಿರುಸಿನ ಮಳೆಯ ಪರಿಣಾಮ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯ ಕೆಲ ಭಾಗಗಳು ಹಾನಿಗೊಂಡಿದ್ದು, ದುರಸ್ತಿಗೆ ತುರ್ತುಕ್ರಮ ಕೈಗೊಳ್ಳುವಂತೆ ಜಿಲ್ಲಾ ಅಭಿವೃದ್ಧಿ ಸಮಿತಿ ಸಮಿತಿ ಸಭೆ ಆಗ್ರಹಿಸಿದೆ.
ಜಿಲ್ಲಾಧಿಕಾರಿ ಕಚೇರಿಯ ಕಿರು ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲೆಯಲ್ಲಿ 96 ಕಿ.ಮೀ. ರಾಷ್ಟ್ರೀಯ ಹೆದ್ದಾರಿಯಿದ್ದು, ಬಹುತೇಕ ಕಡೆ ಹಾನಿಯುಂಟಾಗಿದೆ. ದುರಸ್ತಿಗಾಗಿ ನಿಧಿ ಮಂಜೂರು ಮಾಡಿಲ್ಲ. ಚತುಷ್ಪಥ ರಸ್ತೆಯ ಕಾಮಗಾರಿ ನಡೆಯಬೇಕಿದ್ದು, ಈ ಬಾರಿ ಸುರಿದ ಬಿರುಸಿನ ಮಳೆಗೆ ಅನೇಕ ಕಡೆ ಕುಳಿಗಳು ನಿರ್ಮಾಣವಾಗಿವೆ. ಈ ಹಿನ್ನೆಲೆಯಲ್ಲಿ ತಲಪ್ಪಾಡಿಯಿಂದ ಕಾಲಿಕಡವು ವರೆಗಿನ ರಾಷ್ಟ್ರೀಯ ಹೆದ್ದಾರಿ ಯುದ್ದಕ್ಕೂ ದುರಸ್ತಿಯ ಅಗತ್ಯವಿದೆ ಎಂದು ಶಾಸಕರಾದ ಎನ್.ಎ.ನೆಲ್ಲಿಕುನ್ನು, ಎಂ.ರಾಜಗೋಪಾಲ್ ಮತ್ತು ಕೆ.ಕುಂಞÂರಾಮನ್ ಜಂಟಿಯಾಗಿ ಆಗ್ರಹಿಸಿದರು.
ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ಜಿಲ್ಲೆಗೆ ಪ್ರತ್ಯೇಕ ನಿಧಿ ಮಂಜೂರು ಮಾಡುವಂತೆ ನೀಲೇಶ್ವರ ನಗರಸಭೆ ಅಧ್ಯಕ್ಷ ಪೆÇ್ರ.ಕೆ.ಪಿ.ಜಯರಾಜನ್ ಸಭೆಯಲ್ಲಿ ವಿಷಯ ಮಂಡಿಸಿದರು. ನೀಲೇಶ್ವರ ರಾಜಾ ರಸ್ತೆಯಲ್ಲಿ ಅಕ್ರಮ ಪಾರ್ಕಿಂಗ್ ತಡೆಯಲು ಕ್ರಮ ಕೈಗೊಳ್ಳುವಂತೆ ಮೋಟಾರು ವಾಹನ ಇಲಾಖೆಗೆ ಆದೇಶಿಸಲಾಗಿದೆ.
ಕಾಂಞಂಗಾಡ್ ನಗರದ ಕೆ.ಎಸ್.ಟಿ.ಪಿ. ರಸ್ತೆಯಲ್ಲಿ ಕಲ್ವರ್ಟ್ ಅವೈಜ್ಞಾನಿಕವಾಗಿ ನಿರ್ಮಿಸಲಾದ ಹಿನ್ನೆಲೆಯಲ್ಲಿ ನೀರು ಹರಿದು ಹೋಗದೆ ಸಮಸ್ಯೆಯಾಗಿದೆ. ಅಲಾಮಿಪಳ್ಳಿ ಬಸ್ ನಿಲ್ದಾಣದಲ್ಲಿ ಎಲ್ಲ ಬಸ್‍ಗಳೂ ತೆರಳುವಂತೆ ಮತ್ತು ಬಸ್ ನಿಲ್ದಾಣದಲ್ಲಿ ಫೇರ್ ಸ್ಟೇಜ್ ಬದಲಿಸುವಂತೆ ಕ್ರಮಕೈಗೊಳ್ಳಬೇಕು ಎಂದು ಕಾಂಞಂಗಾಡ್ ನಗರಸಭೆ ಅಧ್ಯಕ್ಷ ವಿ.ವಿ.ರಮೇಶನ್ ತಿಳಿಸಿದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶಾಂತಮ್ಮಾ ಫಿಲಿಪ್, ಸಂಸದರ ಪ್ರತಿನಿಧಿ ಎ.ಗೋವಿಂದನ್ ನಾಯರ್, ಗ್ರಾಮ ಪಂಚಾಯತ್ ಅಧ್ಯಕ್ಷರ ಅಸೋಸಿಯೇಶನ್ ಅಧ್ಯಕ್ಷ ಎ.ಎ.ಜಲೀಲ್, ಜಿಲ್ಲಾ ಯೋಜನಾಧಿಕಾರಿ ಎಸ್.ಸತ್ಯಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು.