ಕುಂಬಳೆ: ದೀನ-ದಲಿತರ ಸರ್ವತೋಮುಖ ಶ್ರೇಯಸ್ಸಿಗಾಗಿ ಶ್ರಮಿಸಿದ ಅಯ್ಯಂಗಾಳಿಯವರ ತತ್ವಾದರ್ಶಗಳನ್ನು ಬದುಕಿನಲ್ಲಿ ಅಳವಡಿಸಿ ಸಮಾಜದ ಅಭಿವೃದ್ದಿಗೆ ತೊಡಗಿಸಿಕೊಳ್ಳುವುದರಿಂದ ಧೀಮಂತನ ಆತ್ಮ ನೆಮ್ಮದಿ ಪಡೆಯುತ್ತದೆ ಎಂದು ಕುಂಬಳೆ ಗ್ರಾ.ಪಂ.ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್.ಅವರು ತಿಳಿಸಿದರು.
ಆದಿ ದಲಿತ್ ಮುನ್ನಡೆ ಸಂಘಟನೆಯ ಜಿಲ್ಲಾ ಸಮಿತಿ ಆಶ್ರಯದಲ್ಲಿ ಕಿದೂರಿನಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಅಯ್ಯಂಗಾಳಿ ಜನ್ಮ ದಿನೋತ್ಸವ ಹಾಗೂ ಎಡಿಎಂಎಸ್(ಆದಿ ದಲಿತ್ ಮುನ್ನೇತ್ರ ಸಮಿತಿ) ವಾರ್ಷಿಕ ದಿನಾಚರಣೆಯನ್ನು ಉದ್ಘಾಟಿಸಿ, ಸಮಿತಿಯ ನೂತನ ಲಾಂಛನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಎಡಿಎಂಎಸ್ ಜಿಲ್ಲಾಧ್ಯಕ್ಷ ಜಿಲ್ಲಾಧ್ಯಕ್ಷ ಚಂದ್ರಶೇಖರ ಕುಂಬಳೆ ಅಧ್ಯಕ್ಷತೆ ವಹಿಸಿದ್ದರು.ಶೋಷಿತರು ಜಾತಿ-ಮತ-ವರ್ಗ ಬೇಧಗಳಿಲ್ಲದೆ ಒಗ್ಗಟ್ಟಿನಿಂದ ವಿವಿಧ ಸವಲತ್ತುಗಳನ್ನು ಬಳಸಿಕೊಂಡು ಮುನ್ನಲೆಗೆ ಬರುವಲ್ಲಿ ಆಸಕ್ತರಾಗಬೇಕು ಎಂದು ಅವರು ಈ ಸಂದರ್ಭ ಕರೆನೀಡಿದರು.
ಹಿರಿಯ ಯಕ್ಷಗಾನ ಕಲಾವಿದ ಸುಂದರ ಅಪ್ಪಯಮೂಲೆ, ಯುವ ಪ್ರತಿಭೆ ಮನೋಜ್ ವಾಂತಿಚ್ಚಾಲ್ ಅವರನ್ನು ಈ ಸಂದರ್ಭ ಸನ್ಮಾನಿಸಿ ಗೌರವಿಸಲಾಯಿತು.
ಸಾಹಿತಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಪದ್ಮನಾಭ ನರಿಂಗಾನ, ಚಂದ್ರ ಕಾಜೂರು, ಹರಿರಾಮ ಕುಳೂರು, ಸಂಜೀವ ಪುಳ್ಕೂರು, ಉದಯಕುಮಾರ್ ಸಿ.ಎಚ್.ಉಪಸ್ಥಿತರಿದ್ದು ಶುಭಹಾರೈಸಿದರು. ಬಾಬು ನಾೈಯ್ಕಾಪು, ಸುಮತಿ ಬಂಬ್ರಾಣ, ಶಿವರಾಮ ಚೂರಿಪಳ್ಳ, ಗಣೇಶ ಕೆ.ಎಂ., ಮಾಧವ ಕಂಪದಮೂಲೆ, ರತೀಶ್ ಮೊದಲಾದವರು ಉಪಸ್ಥಿತರಿದ್ದರು.ರೇವತಿ ಕುಂಬಳೆ ಪ್ರಾರ್ಥಿಸಿದರು. ಕಾರ್ಯದರ್ಶಿ ಸುಂದರ ಕೆ.ಎಂ.ಸ್ವಾಗತಿಸಿ, ಜಿಲ್ಲಾ ಸದಸ್ಯ ಬಿಜು ಅನಂತಪುರ ವಂದಿಸಿದರು. ಬಳಿಕ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಿತು.