ನವದೆಹಲಿ: ಕಣಿವೆ ರಾಜ್ಯ ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370 ನೇ ವಿಧಿಯನ್ನು ರದ್ದುಪಡಿಸುವ ನಿರ್ಧಾರದಲ್ಲಿ ಬಹಳ ಎಚ್ಚರಿಕೆ ವಹಿಸಲಾಗಿತ್ತು. ಸಣ್ಣ ಸುಳಿವನ್ನೂ ನೀಡದೆ ಅಚ್ಚರಿ ರೀತಿಯಲ್ಲಿ ಕೇಂದ್ರ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಳ್ಳುವ ಮೂಲಕ ದೇಶ, ವಿದೇಶಗಳಲ್ಲಿ ಕೌತುಕ ಸೃಷ್ಟಿಸಿದೆ.
ಸೋಮವಾರ ಗೃಹ ಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ ಪ್ರಸ್ತಾವ ಮಂಡಿಸಿ ಅಂಗೀಕಾರ ಪಡೆದುಕೊಳ್ಳುವ ಮೂಲಕ 70 ವರ್ಷಗಳ ಹಳೆಯದಾದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಮೂಲಕ ಕಾಶ್ಮೀರ ನಮ್ಮದು ಎಂಬ ಭಾವನೆ ಮೂಡುವಂತೆ ಮಾಡಿದ್ದಾರೆ. ಈ ಕಾರ್ಯದಲ್ಲಿ ಅಮಿತ್ ಶಾ ಮೇಲ್ವಿಚಾರಣೆಯಲ್ಲಿ ಪ್ರಹ್ಲಾದ್ ಜೋಷಿ ಮತ್ತಿತರ ಸಂಪುಟ ಸಚಿವರಿಂದಲೂ ರಹಸ್ಯ ಕಾಪಾಡಿಕೊಳ್ಳಲಾಗಿತ್ತು.
ರಾಜ್ಯಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರಕ್ಕೆ ಅಗತ್ಯ ಸಂಖ್ಯಾ ಬಲ ಇಲ್ಲ. ಆದರೂ, ಆರ್ ಟಿಐ ತಿದ್ದುಪಡಿ ಮಸೂದೆ ಹಾಗೂ ತ್ರಿವಳಿ ತಲಾಖ್ ಮಸೂದೆಗಳು ಯಶಸ್ವಿಯಾಗಿ ಅಂಗೀಕಾರಗೊಂಡಿದ್ದವು.
ಇದೇ ಹಾದಿಯಲ್ಲಿ ಮುನ್ನುಗಿದ್ದ ಕೇಂದ್ರ ಸರ್ಕಾರ ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370 ನೇ ವಿಧಿಯನ್ನು ರದ್ದುಪಡಿಸುವ ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿ ಪುನರ್ ರಚಿಸುವ ಮಸೂದೆಗೆ ಸೋಮವಾರ ಮೇಲ್ಮನೆಯಲ್ಲಿ ಬಿಎಸ್ಪಿ, ಬಿಜೆಡಿ ಸೇರಿದಂತೆ ಮತ್ತಿತರ ಪಕ್ಷಗಳಿಂದ ಬೆಂಬಲ ಪಡೆಯುವ ಮೂಲಕ ಅಂಗೀಕಾರ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದು ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರ ಚಾಣಕ್ಯ ನೀತಿಗೆ ಹಿಡಿದ ಕೈಗನ್ನಡಿ ಎಂಬಂತಿದೆ
ಪೋನ್ ಕರೆಗಳು: ಈ ಮಹತ್ವದ ನಿರ್ಧಾರ ಬೆಂಬಲಿಸುವಂತೆ ವೈಎಸ್ ಆರ್ ಕಾಂಗ್ರೆಸ್, ಬಿಜೆಡಿ, ಬಿಎಸ್ಪಿ ಪಕ್ಷಗಳ ಮುಖಂಡರನ್ನು ಪೋನ್ ಕರೆ ಮಾಡುವ ಮೂಲಕ ಒಪ್ಪಿಸಲಾಗಿದೆ. ವೈಎಸ್ ಆರ್ ಕಾಂಗ್ರೆಸ್ ಮುಖಂಡ ವೈಎಸ್ ಜಗನ್ ಮೋಹನ್ ರೆಡ್ಡಿ, ಬಿಜೆಡಿ ವರಿಷ್ಠ ನವೀನ್ ಪಟ್ನಾಯಕ್ , ಟಿಆರ್ ಎಸ್ ಮುಖಂಡ ಕೆ. ಚಂದ್ರಶೇಖರ್ ರಾವ್, ಬಿಎಸ್ಪಿಯ ಸತೀಶ್ ಮಿಶ್ರಾ ಮೂಲಕ ಪಕ್ಷದ ವರಿಷ್ಠೆ ಮಾಯಾವತಿ ಅವರನ್ನು ಸಂಪರ್ಕಿಸಲಾಗಿದೆ.
ಮಹತ್ವದ ಪಾತ್ರ ನಿರ್ವಹಿಸಿದ ನಾಲ್ವರು ಸಚಿವರು: ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ್ ಜೋಷಿ, ಪಿಯೂಷ್ ಗೋಯಲ್, ಧಮೇರ್ಂದ್ರ ಪ್ರದಾನ್ ಹಾಗೂ ಇತ್ತೀಚಿಗೆ ಬಿಜೆಪಿಗೆ ಸೇರ್ಪಡೆಯಾದ ಸಿಎಂ ರಮೇಶ್ ಈ ಕಾರ್ಯದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.
ನಿರ್ಣಯದ ಮೇಲೆ ಮತದಾನ: ಸಂವಿಧಾನದ 370 ನೇ ವಿಧಿ ರದ್ದುಪಡಿಸುವ ನಿರ್ಣಯದ ಪರವಾಗಿ ಅಗತ್ಯವಾದಷ್ಟು ಬೆಂಬಲ ದೊರಕಿಸುವ ಜವಾಬ್ದಾರಿಯನ್ನು ಸದನದ ನಾಯಕರಿಗೆ ನೀಡಲಾಗಿತ್ತು. ಬಿಲ್ ನ್ನು ಈ ನಾಲ್ಕು ನಾಯಕರಿಗೆ ಹಂಚಲಾಗಿತ್ತು. ಈ ಎಲ್ಲಾ ನಾಯಕರು ವೈಎಸ್ ಆರ್ ಕಾಂಗ್ರೆಸ್, ಬಿಎಸ್ಪಿ, ಬಿಜೆಡಿ , ಅಥವಾ ಟಿಆರ್ ಎಸ್ ಪಕ್ಷದ ಒಬ್ಬ ಸಂಸದನೊಂದಿಗೆ ಮಾತುಕತೆ ನಡೆಸಿ ಮನವೊಲಿಸುವ ಕಾರ್ಯ ನೀಡಲಾಗಿತ್ತು. ಬಿಜೆಪಿ ವಿರೋಧಿಗಳನ್ನು ಕೂಡಾ ಮನವೊಲಿಸುವಂತೆ ಸೂಚಿಸಲಾಗಿತ್ತು. ಮೂರರಿಂದ ಈ ನಾಲ್ಕು ಸಚಿವರಿಗೆ ಮಾತ್ರ ಜಮ್ಮು- ಕಾಶ್ಮೀರಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಳ್ಳುವುದು ಗೊತಿತ್ತು.
ಶಾಸನದ ಕರಡು ರಚನೆ: ಶಾಸನದ ಕರಡು ರಚನೆ ಹಾಗೂ ಅದಕ್ಕೆ ವಿನ್ಯಾಸ ನೀಡುವ ಜವಾಬ್ದಾರಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಿಗೆ ಮಾತ್ರ ಸೇರಿತ್ತು. ಆರ್ ಟಿಐ ತಿದ್ದುಪಡಿ ಹಾಗೂ ತ್ರಿವಳಿ ತಲಾಖ್ ಮಸೂದೆ ಅಂಗೀಕಾರದ ನಂತರ 370 ನೇ ವಿಧಿ ರದ್ದತಿ ಮಸೂದೆ ಕೂಡಾ ಅಂಗೀಕಾರವಾಗಲಿದೆ ಎಂಬ ವಿಶ್ವಾಸ ಸರ್ಕಾರಕ್ಕೆ ಇತ್ತು. ಈ ನಿರ್ಣಯದ ಪರವಾಗಿ 125 ಮತಗಳು ಬಿದ್ದರೆ, ವಿರುದ್ಧವಾಗಿ 61 ಮತಗಳು ಬಿದ್ದವು. ಈ ಮೂಲಕ ಮಸೂದೆ ಅಂಗೀಕಾರಗೊಂಡು ಹೊಸ ಇತಿಹಾಸವನ್ನು ಬರೆಯಲಾಯಿತು.