ಬದಿಯಡ್ಕ: ಸಹಕಾರಿ ಕ್ಷೇತ್ರಗಳ ಮೂಲಕ ಸಮಾಜವು ಅಭಿವೃದ್ಧಿಪಥದತ್ತ ಸಾಗುತ್ತಿದೆ. ಆಧುನಿಕ ತಂತ್ರಜ್ಞಾನಗಳು ಬೆಳವಣಿಗೆಯನ್ನು ಕಾಣುತ್ತಿದ್ದು, ಅದಕ್ಕೆ ನಾವು ಹೊಂದಿಕೊಳ್ಳಲು ಹಿಂಜರಿಯಬಾರದು. ಅಡಿಕೆ ಕೃಷಿಯೊಂದಿಗೆ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್. ಆರ್. ಸತೀಶ್ಚಂದ್ರ ಹೇಳಿದರು.
ಗುರುವಾರ ಬದಿಯಡ್ಕ ಶ್ರೀಗುರುಸದನದಲ್ಲಿ ಜರಗಿದ ಕ್ಯಾಂಪ್ಕೋ ಸದಸ್ಯ ಬೆಳೆಗಾರರ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಅಡಿಕೆ ಬೆಳೆಗಾರರ ಮುಂದಿರುವ ದೊಡ್ಡ ಸವಾಲನ್ನು ಎದುರಿಸಲು ಅಡಿಕೆಯೊಂದಿಗೆ ಕಾಳುಮೆಣಸು, ರಾಂಬುಟಾನ್, ಕೊಕ್ಕೊ ಮೊದಲಾದ ಉಪಬೆಳೆಗಳನ್ನು ಅಳವಡಿಸಿಕೊಳ್ಳಬೇಕು. ಹಿರಿಯರಿಂದ ಬಂದ ಈ ಭೂಮಿಯನ್ನು ಉಳಿಸಲು ಸಾವಯವ ಕೃಷಿಯತ್ತ ಒಲವನ್ನು ತೋರಿಸಬೇಕು. ಹಸಿರನ್ನು ಉಳಿಸಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ವಿಷಕಾರೀ ಪದಾರ್ಥಗಳನ್ನು ನಮ್ಮ ಕೃಷಿ ಭೂಮಿಗೆ ಉಪಯೋಗಿಸಬಾರದು. ಪ್ಲಾಸ್ಟಿಕ್, ಎಂಡೋಸಲ್ಫಾನ್ ಮೊದಲಾದವುಗಳಿಂದ ಮುಂದಿನ ಪೀಳಿಗೆಯನ್ನು ರಕ್ಷಿಸುವ ಮಹತ್ತರವಾದ ಜವಾಬ್ದಾರಿಯನ್ನು ನಾವು ನಿಭಾಯಿಸಬೇಕು ಎಂದರು.
ಸಮಾರಂಭವನ್ನು ಐವರು ಕ್ಯಾಂಪ್ಕೋ ಸದಸ್ಯ ಬೆಳೆಗಾರರು ದೀಪಬೆಳಗಿಸಿ ವಿಶಿಷ್ಟವಾಗಿ ಚಾಲನೆ ನೀಡಿದ್ದರು. ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಭಂಡಾರಿ ಎಂ. 2018-19ನೇ ಸಾಲಿನ ವರದಿಯನ್ನು ಮಂಡಿಸಿ, ಪ್ರಸಕ್ತ ಸಾಲಿನಲ್ಲಿ ಕ್ಯಾಂಪ್ಕೋ 1875 ಕೋಟಿಯ ದಾಖಲೆಯ ವ್ಯವಹಾರವನ್ನು ಮಾಡಿದೆ. ಕ್ಯಾಂಪ್ಕೋ ಉತ್ಪನ್ನಗಳಿಗೆ ವಿದೇಶದಿಂದ ಸಾಕಷ್ಟು ಬೇಡಿಕೆಗಳಿವೆ. `ವಿಂಡ್ ವೀಲ್'(ಗಾಳಿ ಯಂತ್ರ)ದ ಮೂಲಕ ವಿದ್ಯುತ್ ಉತ್ಪಾದಿಸಲಾಗಿದೆ. 19ಮಂದಿ ಸದಸ್ಯರಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಹಾಗೂ 7 ಮಂದಿಗೆ ಡಯಾಲಿಸಿಸ್‍ಗೆ ಸಹಾಯವನ್ನು ಮಾಡಲಾಗಿದೆ ಎಂದು ಸಮಗ್ರ ವರದಿಯನ್ನು ಮಂಡಿಸಿದರು.
ಸಭೆಯಲ್ಲಿ ಪಾಲ್ಗೊಂಡ ಸದಸ್ಯ ಬೆಳೆಗಾರರು ತಮ್ಮ ಸಮಸ್ಯೆಗಳ ಕುರಿತು ಮಾತನಾಡಿದರು. ಅಡಿಕೆ ಧಾರಣೆಯಲ್ಲಿ ಸ್ಥಿರತೆಯನ್ನು ಕಂಡುಕೊಳ್ಳಬೇಕು, ಅಡಿಕೆ ಖರೀದಿಸಲು ಸಂಚಾರಿ ವಾಹನ ವ್ಯವಸ್ಥೆ ಮಾಡಬೇಕು, ಮರಹತ್ತುವ ಕುಶಲಕರ್ಮಿಗಳಿಗೆ ಸಹಾಯವೊದಗಿಸಬೇಕು, ಪ್ರಾಕೃತಿಕ ವಿಕೋಪಕ್ಕೆ ತುತ್ತಾದ ಅಡಿಕೆ ಮರ, ತೋಟಗಳಿಗೆ ವಿಮೆಯನ್ನು ನೀಡಬೇಕು, ಸಾವಯವ ಕೃಷಿಗೆ ಉತ್ತೇಜನವನ್ನು ನೀಡುವ ಸಲುವಾಗಿ ಗೋಸಾಕಣೆಗೆ ಮಿತವಾದ ದರದಲ್ಲಿ ಪಶು ಆಹಾರ ತಯಾರಿ, ವಿತರಣೆಗೆ ಸಂಸ್ಥೆ ಮುಂದೆ ಬರಬೇಕು, ಸಾವಯವ ಗೊಬ್ಬರ ತಯಾರಿ ಮೊದಲಾದ ಬೇಡಿಕೆಗಳನ್ನು ಕೃಷಿಕರು ಅಧ್ಯಕ್ಷರ ಮುಂದಿಟ್ಟರು. ಅವರು ಉತ್ತರಿಸುತ್ತಾ ಬೆಳೆಗಾರರ ಹಿತದೃಷ್ಟಿಯನ್ನು ಮುಂದಿಟ್ಟುಕೊಂಡು ಸಂಸ್ಥೆಯು ಮುಂದುವರಿಯುತ್ತಿದೆ. ಕೃಷಿಕರು ಅನುಭವಿಸುತ್ತಿರುವ ಸಂಕಷ್ಟಗಳಿಗೆ ಸಮಗ್ರ ಪರಿಹಾರವನ್ನು ಕಾಣುವ ಸಲುವಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕ್ಯಾಂಪ್ಕೋ ಉಪಾಧ್ಯಕ್ಷ ಶಂಕರನಾರಾಯಣ ಖಂಡಿಗೆ, ಪ್ರಧಾನ ಪ್ರಬಂಧಕಿ ರೇಶ್ಮಾ ಮಲ್ಯ, ನಿರ್ದೇಶಕರುಗಳಾದ ಕೆ. ಸತೀಶ್ಚಂದ್ರ ಭಂಡಾರಿ, ಎಂ.ಕೆ.ಶಂಕರನಾರಾಯಣ ಭಟ್, ಜಯರಾಮ ಸರಳಾಯ, ಕೆ.ರಾಜಗೋಪಾಲ, ಕೆ.ಬಾಲಕೃಷ್ಣ ರೈ, ಎ.ಸುಬ್ರಹ್ಮಣ್ಯ ಭಟ್, ಹಿರಿಯ ಪ್ರಬಂಧಕ ಮುರಳಿ, ವಲಯ ಪ್ರಬಂಧಕ ಪ್ರಕಾಶ್ ಶೆಟ್ಟಿ, ಮಾಜಿ ಕ್ಯಾಂಪ್ಕೋ ನಿರ್ದೇಶಕರು, ವಿವಿಧ ಸಹಕಾರಿ ಸಂಸ್ಥೆಗಳ ಪ್ರತಿನಿಧಿಗಳು, ಸದಸ್ಯ ಬೆಳೆಗಾರರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ನಿರ್ದೇಶಕರುಗಳಾದ ಬಿ.ಶಿವಕೃಷ್ಣ ಭಟ್ ಸ್ವಾಗತಿಸಿ, ಪದ್ಮರಾಜ ಪಟ್ಟಾಜೆ ವಂದಿಸಿದರು. ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ವಿದ್ಯಾರ್ಥಿಗಳು ಪ್ರಾರ್ಥನಾ ಶ್ಲೋಕವನ್ನು ಸುಶ್ರಾವ್ಯವಾಗಿ ಪಠಿಸಿದ್ದರು.