ಬದಿಯಡ್ಕ : ಗುಡ್ಡೆ ಕುಸಿತದಿಂದಾಗಿ ವಾಹನ ಸಂಚಾರ ಮೊಟಕುಗೊಂಡ ಬದಿಯಡ್ಕ-ಪೆರ್ಲ-ಕಲ್ಲಡ್ಕ ಅಂತರ್ ರಾಜ್ಯ ರಸ್ತೆ ಸಂಚಾರ ಸುಧೀರ್ಘ ಹತ್ತು ದಿನಗಳ ಬಳಿಕ ಪುನರ್ ಆರಂಭಿಸಲು ಷರತ್ತಿನ ಮೇರೆಗೆ ಕೊನೆಗೂ ಗುರುವಾರ ಉನ್ನತ ಮಟ್ಟದ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವುದರೊಂದಿಗೆ ಜಟಿಲತೆ ನಿವಾರಣೆಯಾಗಿದೆ.
ಬದಿಯಡ್ಕ ಪೆರ್ಲ ಮಧ್ಯೆ ಕರಿಂಬಿಲದಲ್ಲಿ ಗುಡ್ಡ ಕುಸಿತದಿಂದ ಕಳೆದ ಹತ್ತು ದಿನಗಳಿಂದ ವಾಹನಗಳ ಸಹಿತ ಜನಸಂಚಾರಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿತ್ತು. ಜು.22 ರಂದು ಸಂಜೆ ವೇಳೆ ರಸ್ತೆಗೆ ಗುಡ್ಡೆ ಕುಸಿತವುಂಟಾಗಿ ಈ ಮೂಲಕದ ವಾಹನ ಸಂಚಾರ ಪೂರ್ಣವಾಗಿ ಮೊಟಕುಗೊಂಡಿತ್ತು. ಅಧಿಕಾರಿಗಳ ಭಾಗದಿಂದ ಸೂಕ್ತ ಕ್ರಮವುಂಟಾಗಿರಲಿಲ್ಲ. ಇದರಿಂದ ಸಾರ್ವಜನಿಕರು ಪ್ರತಿಭಟನೆಗೆ ಮುಂದಾಗುತ್ತಿದ್ದಂತೆ ತಾತ್ಕಾಲಿಕವಾಗಿ ರಸ್ತೆ ತೆರೆದುಕೊಡಲು ಶಾಸಕ ಎನ್.ಎ. ನೆಲ್ಲಿಕುನ್ನು ಅವರು ಸರ್ವಪಕ್ಷ ಸಭೆಯಲ್ಲಿ ನಿರ್ಧರಿಸಿದ್ದರು. ಇದರಂತೆ ಪೆರ್ಲ ಭಾಗದಿಂದ ಬರುವ ಬಸ್‍ಗಳು ಕರಿಂಬಿಲ ಸೇತುವೆ ತನಕವೂ, ಬದಿಯಡ್ಕದಿಂದ ತೆರಳುವ ಬಸ್‍ಗಳು ಕರಿಂಬಿಲ ವರೆಗೆ ಸಂಚಾರ ನಡೆಸುವುದಾಗಿದೆ. ಒಂದು ಬಸ್ ಇಳಿದು ಸುಮಾರು 100 ಮೀಟರ್ ನಡೆದು ಮತ್ತೊಂದು ಬಸ್‍ಗೆ ಹತ್ತಿ ಪ್ರಯಾಣಿಸಬೇಕಾಗಿತ್ತು. ಆದರೆ ಜಿಲ್ಲಾಧಿಕಾರಿಗಳು ಇದಕ್ಕೆ ಕಠಿಣ ನಿಲುವು ತಳೆದು ಭೂಗರ್ಭ ಶಾಸ್ತ್ರಜ್ಞರ ಅನುಮತಿ ಇಲ್ಲದೆ ಯಾವ ಕಾರಣಕ್ಕೂ ಸಂಚಾರ ನಡೆಸಕೂಡದೆಂಬ ಆದೇಶ ನೀಡಿದ್ದರಿಂದ ಮತ್ತೆ ಸಮಚಾರ ಮೊಟಕುಗೊಂಡಿತು. ಆ ಬಳಿಕ ಜಿಲ್ಲಾ ಪಮಚಾಯತಿ ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್ ಅವರು ಬದಿಯಡ್ಕದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಲಲು ಒತ್ತಾಯಿಸಿದ್ದರು. ಅಲ್ಲದೆ ಅಗತ್ಯ ಕ್ರಮಗಳನ್ನು ಶೀಘ್ರ ಕೈಗೊಳ್ಳದಿದ್ದರೆ ಉಗ್ರ ಪ್ರತಿಭಟನೆ ನಡೆಸುಬುದಾಗಿ ಎಚ್ಚರಿಸಿದ್ದರು.
ಈ ಮಧ್ಯೆ ಗುರುವಾರ ಅಪರಾಹ್ನ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಸೇರಿದ ಉನ್ನತ ಅಧಿಕಾರಿಗಳು, ಜನಪ್ರತಿನಿಧಿಗಳ ಸಭೆಯಲ್ಲಿ ಷರತ್ತು ಬದ್ದ ಸಂಚಾರಕ್ಕೆ ಕೊನೆಗೂ ಒಪ್ಪಿಗೆ ನೀಡಲಾಗಿದೆ. ಇದರಂತೆ ಬೆಳಿಗ್ಗೆ 6 ರಿಂದ ರಾತ್ರಿ 7ರ ವರೆಗೆ ವಾಹನ ಸಹಿತ ಇತರ ವಾಹನ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ರಾತ್ರಿ 9ರಿಂದ ಬೆಳಿಗ್ಗೆ 6ರ ವರೆಗೆ ವಾಹನ ಸಂಚಾರ ಸಂಪೂರ್ಣ ನಿಷೇಧ ಹಾಕಲಾಗಿದೆ. ಜೊತೆಗೆ ಬಸ್ ಸಹಿತ ಇತರ ಸಣ್ಣ ವಾಹನಗಳಿಗಷ್ಟೇ ಈಗ ಸಂಚಾರ ಅನುಮತಿ ನೀಡಲಾಗಿದ್ದು, ಸರಕು ಸಹಿತ ಘಟನ ವಾಹನ ಸಂಚಾರಕ್ಕೆ ಅನುಮತಿ ನಿಯಂತ್ರಿಸಲಾಗಿದೆ. ಗುಡ್ಡ ಕುಸಿದಿರುವ ಕರಿಂಬಿಲದಲ್ಲಿ ಬಸ್ ಹಾಗೂ ಇತರ ವಾಹನಗಳ ಪ್ರಯಾಣಿಕರು ವಾಹನದಿಂದ ಕೆಳಗಿಳಿದು ಗುಡ್ಡೆ ಕುಸಿತಗೊಂಡಿರುವ ಪ್ರದೇಶದ ಆಚೀಚೆಯಿಂದ ಮತ್ತೆ ವಾಹನ ಏರಿ ಪ್ರಯಾಣ ಮುಂದುವರಿಸುವ ಬಗ್ಗೆ ನಿರ್ದೇಶನ ನೀಡಲಾಗಿದೆ. ಆದರೆ ಹಿರಿಯ ನಾಗರಿಕರು, ಗರ್ಭಿಣಿ ಸ್ತ್ರೀಯರು, ಅನಾರೋಗ್ಯ ಪೀಡಿತರು ವಾಹನದಿಂದ ಕೆಳಗಿಳಿಯಬೇಕಿಲ್ಲ ಎಂದು ಜಿಲ್ಲಾಧಿಕಾರಿಗಳು ಕಠಿಣ ಸಮದೇಶದ ಆದೇಶ ನೀಡಿರುವರು. ಆದರೆ ಸಂಜೆ 6.30ಕ್ಕೆ ಪುತ್ತೂರು ನಿಲ್ದಾಣದಿಂದ ಹೊರಟು 8.20ರ ವೇಳೆ ಕರಿಂಬಿಲ ರಸ್ತೆಯಾಗಿ ಸಂಚರಿಸುವ ಕರ್ನಾಟಕ ರಾಜ್ಯ ರಸ್ತೆಸಾರಿಗೆ ಬಸ್ ಸಂಚಾರಕ್ಕೆ ವಿಶೇಷ ಅನುಮತಿಯನ್ನೂ ನೀಡಲಾಗಿದೆ.
ಸಭೆಯಲ್ಲಿ ಲೋಕೋಪಯೋಗಿ ಇಲಾಖೆಯ ರಸ್ತೆ ವಿಭಾಗದ ಅಭಿಯಂತರ ವಿನೋದ್, ದಂಡಾಧಿಕಾರಿ ದೇವೀದಾಸ್, ಶಾಸಕ ಎನ್ ಎ ನೆಲ್ಲಿಕುನ್ನು, ಜಿ.ಪಂ. ಅಧ್ಯಕ್ಷ ಎಜಿಸಿ ಬಶೀರ್, ಮುಖಂಡರಾದ ಚಂದ್ರಹಾಸ ರೈ ಪೆರಡಾಲ, ಮಾಹಿನ್ ಕೇಳೋಟ್, ಕುಂಜಾರು ಮೊಹಮ್ಮದ್,ಜಗನ್ನಾಥ ಶೆಟ್ಟಿ, ತಾಲೂಕು ಬಸ್ ಮಾಲಕರ ಸಂಘದ ಅಧ್ಯಕ್ಷ ಗಿರೀಶ್, ಜೀವನ್ ಥೋಮಸ್, ಜಿ.ಪಂ. ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್, ಬ್ಲಾ.ಪಂ.ಸದಸ್ಯ ಅವಿನಾಶ್ ರೈ, ಬದಿಯಡ್ಕ ಗ್ರಾ.ಪಂ.ಸ್ಥಾಯೀ ಸಮಿತಿ ಅಧ್ಯಕ್ಷ ಶಾಮಪ್ರಸಾದ್ ಮಾನ್ಯ, ಅನ್ವರ್ ಓಝೋನ್, ಸದಸ್ಯರಾದ ಬಾಲಕೃಷ್ಣ ಶೆಟ್ಟಿ ಕಡಾರು,ವಿಶ್ವನಾಥ ಪ್ರಭು ಕರಿಂಬಿಲ, ಪುಷ್ಪಾವತಿ, ಲಕ್ಷ್ಮೀನಾರಾಯಣ ಪೈ, ಬದ್ರುದ್ದೀನ್ ತಾಸೀಂ ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿ ಕಾರ್ಯಾಲಯದಲ್ಲಿ ಗುರುವಾರದ ಸಭೆಯ ನಿರ್ಧಾರ ಹೊರಬೀಳುತ್ತಿರುವಂತೆ ವಾಹನ ಸಂಚಾರ ಪುನರಾರಂಭಗೊಂಡಿದೆ.