ಪೆರ್ಲ: ತುಳುನಾಡಿನ ಆಚಾರ-ಅನುಷ್ಠಾನಗಳು ಪ್ರಕೃತಿ-ಜೀವ ಸಂಬಂಧಗಳೊಂದಿಗೆ ಹಾಸುಹೊಕ್ಕಾಗಿ ವಿಶಿಷ್ಟ ಪರಂಪರೆಯಾಗಿ ಮೂಡಿಬಂದಿದೆ. ವಿಸ್ತಾರವಾಗಿರುವ ಇಲ್ಲಿಯ ನಂಬಿಕೆಗಳು ಮಾನವೀಯ ಮೌಲ್ಯಗಳೊಂದಿಗೆ ಪರಂಪರೆಯನ್ನು ಸುಧೀರ್ಘ ಕಾಲ ಮುನ್ನಡೆಸಿದೆ ಎಂದು ವಾಂತಿಚ್ಚಾಲ್ ಮಂತ್ರಮೂರ್ತಿ ಗುಳಿಗ ಸನ್ನಿಧಿಯ ಪ್ರಧಾನ ಕರ್ಮಿ ಗೋಪಾಲಕೃಷ್ಣ ಕುಮಾಲ್ ವಾಂತಿಚ್ಚಾಲ್ ಅವರು ತಿಳಿಸಿದರು.
ಪೆರ್ಲದ ಸಾಹಿತ್ಯ, ಸಾಂಸ್ಕøತಿಕ, ಸಾಮಾಜಿಕ ಸಂಸ್ಥೆಯಾದ ಸವಿ ಹೃದಯದ ಕವಿ ಮಿತ್ರರು ವೇದಿಕೆಯ ನೇತೃತ್ವದಲ್ಲಿ ಪೆರ್ಲ ಇಡಿಯಡ್ಕದ ಶ್ರೀದುರ್ಗಾಪರಮೇಶ್ವರಿ, ಉಳ್ಳಾಲ್ತಿ ಹಾಗೂ ಶ್ರೀವಿಷ್ಣುಮೂರ್ತಿ ದೇವಾಲಯದ ಸಭಾ ಭವನದಲ್ಲಿ ಭಾನುವಾರ ಆಯೋಜಿಸಲಾದ ಕರ್ಕಟಕ ಮಾಸ ಪ್ರಯುಕ್ತವಾದ "ಅಕ್ಷರದ ಆಟಿ ಅಟ್ಟಣೆ" ವಿಶೇಷ ಸಾಹಿತ್ಯ ಕಾರ್ಯಕ್ರಮಲ್ಲಿ ಹಮ್ಮಿಕೊಳ್ಳಲಾಗಿದ್ದ "ಆಟಿ ಆಚರಣೆ-ಪರಂಪರೆ ಮತ್ತು ಮಹಾಕಾವ್ಯ ರಾಮಾಯಣ-ತೌಳವ ನಂಬಿಕೆ" ಎಂಬ ವಿಷಯದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.
ತುಳುನಾಡಿನ ಮಹಾನ್ ಶಕ್ತಿಗಳಾಗಿ ಆರಾಧಿಸಿ, ಆಚರಿಸಿಕೊಂಡು ಬಂದಿರುವ ನಂಬಿಕೆಗಳ ಹಿಂದೆ ಜೀವಪರ ಕಾಳಜಿಯ ತುಡಿತ ಮೈವೆತ್ತು ಜನಜೀವನವನ್ನು ಸಮೃದ್ದಗೊಳಿಸಿದೆ. ಇತರ ಸಾಂಸ್ಕøತಿಕತೆಯನ್ನು ತೆರೆದ ಹೃದಯದಿಂದ ಸ್ವೀಕರಿಸಿದ ತುಳುವರು ಬೇಧಕಲ್ಪಿಸದೆ ಅನುಷ್ಠಾನಗಳಲ್ಲಿ ಸಮೀಕರಣಗೊಳಿಸಿರುವುದನ್ನು ಕಾಣುತ್ತೇವೆ ಎಂದು ತಿಳಿಸಿದರು. ಭಾರತೀಯತೆಯ ಮೇರು, ಆದಿ ಮಹಾಕಾವ್ಯ ರಾಮಾಯಣವು ತುಳುನಾಡಿನಲ್ಲಿ ಇಲ್ಲಿಯ ಮಣ್ಣು, ವಾತಾವರಣದಲ್ಲಿ ಸಿದ್ದಗೊಂಡ ರೀತಿಯಲ್ಲಿ ಚಿತ್ರಿಸಲಾಗಿದೆ. ಮೂಲ ಕಾವ್ಯಕ್ಕೆ ಅಪಚಾರವಾಗದಂತೆ ವಿವಿಧ ಕೋನಗಳಲ್ಲಿ ಸೃಷ್ಟಿಸಲ್ಪಟ್ಟ ಇಂತಹ ಕಾವ್ಯಾತ್ಮಕತೆ ಕರಾವಳಿಯ ವೈಶಿಷ್ಟ್ಯದ ಹೆಗ್ಗುರುತು ಎಂದು ವಿಶ್ಲೇಶಿಸಿದರು.
ಹೊಸ ತಲೆಮಾರು ತೌಳವ ಪರಂಪರೆಯ ಬೇರುಗಳನ್ನು ಮರೆಯದಿರಲಿ ಎಂದು ಕಳಕಳಿ ವ್ಯಕ್ತಪಡಿಸಿದ ಅವರು ನಮ್ಮಲ್ಲಿ ಆಯೋಜನೆಗೊಳ್ಳುವ ವಿವಿಧ ಆಚರಣೆಗಳಲ್ಲಿ ಯುವಜನರನ್ನು ಉತ್ಸಾಹದಿಂದ ಪಾಲ್ಗೊಳಿಸುವಲ್ಲಿ ಪ್ರಜ್ಞಾವಂತ ಹಿರಿಯರು ಕ್ರಿಯಾತ್ಮಕ ಚಟುವಟುಕೆಗಳನ್ನು ಹಮ್ಮಿಕೊಳ್ಳುವ ಅಗತ್ಯ ಇದೆ ಎಂದು ಅಭಿಪ್ರಾಯ ಮಂಡಿಸಿದರು.
ಈ ಸಂದರ್ಭ ಖ್ಯಾತ ಸಾಹಿತಿ ಎಚ್.ಎಸ್.ವೆಂಕಟೇಶ್ ಮೂರ್ತಿ ಅವರ ಪ್ರಸಿದ್ದ ನಾಟಕ ಕೃತಿ ಮಂಥರೆಯ ಬಗ್ಗೆ ಕೃತಿ ವಿಮರ್ಶೆ ನಡೆಸಿದ ಶಿಕ್ಷಕಿ, ಸಂಶೋಧಕಿ ಸೌಮ್ಯಾಪ್ರಸಾದ್ ಕಿಳಿಂಗಾರ್ ಮೂಲ ರಾಮಾಯಣ ಕೃತಿ ಆಧರಿಸಿ ನೂರಾರು ದೃಷ್ಟಿಕೋನದಲ್ಲಿ ಹಲವು ಕೃತಿಗಳು ಹೊರಬಂದಿದೆ. ಇದರಿಂದ ಮೂಲ ರಾಮಾಯಣವನ್ನು ದರ್ಶಿಸಲು ಪ್ರೇರಣೆ ನೀಡುತ್ತದೆ ಎಂದು ತಿಳಿಸಿದರು. ಮಂಥರೆ ಕೃತಿಯು ಸ್ತ್ರೀಪರ ಧೋರಣೆಯ ಕೃತಿಯಾಗಿ ಹೊರಹೊಮ್ಮಿದೆ. ಸ್ತ್ರೀ ಸಹಜ ಆಕಾಂಕ್ಷೆ, ತುಮುಲಗಳು ಮಂಥರೆ ಪ್ರತಿನಿಧಿಸುತ್ತದೆ. ರಾಮಾಯಣ ಮರುಸೃಷ್ಟಿಯ ಕೆಲಸ ಈ ಕೃತಿಯಲ್ಲಿ ನಡೆದಿದೆ ಎಂದು ತಿಳಿಸಿದರು. ಜೀವ ಸೃಷ್ಟಿ ಮತ್ತು ಜೀವ ನಾಶದ ಪ್ರತೀಕವಾದ ನದಿಯಂತೆ ಮಂಥರೆ ಕಂಡುಬರುತ್ತಾಳೆ. ಸಮರ್ಥ ರಾಜಕಾರಣಿಯ ಚಿಂತನೆ ಮಂಥರೆಯೊಳಗಿತ್ತು ಎಮಬುದು ಕೃತಿಯಲ್ಲಿ ವೇದ್ಯವಾಗುತ್ತದೆ. ಸಮಕಾಲೀನ ಚಿಂತನೆಯ ಹಿನ್ನೆಲೆಯಲ್ಲಿ ಮಂಥರೆ ವಿಶಾಲ ಅರ್ಥಪಡೆಯುತ್ತದೆ ಎಂದು ತಿಳಿಸಿದರು. ಕೃತಿಯ ಸಮಗ್ರ ವಿಶ್ಲೇóಣೆಯಲ್ಲಿ ವಾತ್ಸಲ್ಯದ ಪ್ರತಿನಿಧಿಯಾಗಿ ಮಂಥರೆ ನಿರೂಪಿತಳಾಗಿದ್ದಾಳೆ. ಪಾತ್ರವನ್ನು ಒಳಗಿದ್ದು ನೋಡಿದಾಗ ವಿಶೇಷ ಹೊಳಹುಗಳು ಮೂಡಿಬರುತ್ತದೆ ಎನ್ನುವುದು ಮಂಥರೆ ನಾಟಕ ಕೃತಿಯ ವಿಶೇಷತೆಯಾಗಿದೆ ಎಂದು ವಿಶ್ಲೇಶಿಸಿದರು.
ಹಿರಿಯ ಸಾಹಿತಿ ಹರೀಶ್ ಪೆರ್ಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪುರುಷೋತ್ತಮ ಭಟ್ ಕೆ. ನಿರೂಪಿಸಿದರು. ಸುಭಾಷ್ ಪೆರ್ಲ, ಚೇತನಾ ಕುಂಬಳೆ, ಶ್ವೇತಾ ಕಜೆ, ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಜಯ ಮಣಿಯಂಪಾರೆ, ಗಾಯಕ ವಸಂತ ಬಾರಡ್ಕ, ರಾಮಚಂದ್ರ ಬಲ್ಲಾಳ್ ಮುಳ್ಳೇರಿಯ, ರಿತೇಶ್ ಕಿರಣ್ ಕಾಟುಕುಕ್ಕೆ, ಆನಂದ ರೈ ಅಡ್ಕಸ್ಥಳ,ಅಭಿಷೇಕ್ ಪೆರ್ಲ ಮೊದಲಾದವರು ಉಪಸ್ಥಿತರಿದ್ದರು.