ನವದೆಹಲಿ: ಸಂಸತ್ತಿನ ಉಭಯ ಸದನಗಳಲ್ಲಿ ಅನುಮೋದನೆಯಾದ ತ್ರಿವಳಿ ತಲಾಖ್ ಮಸೂದೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಕಿತ ಹಾಕಿದ್ದಾರೆ.
ಸದ್ಯದಲ್ಲಿಯೇ ಅದು ಕಾನೂನು ಆಗಿ ಜಾರಿಗೆ ಬರಲಿದೆ ಎಂದು ಸರ್ಕಾರದ ಅಧಿಸೂಚನೆ ತಿಳಿಸಿದೆ.
ಮುಸ್ಲಿಂ ಧರ್ಮದ ವೈಯಕ್ತಿಕ ಕಾನೂನಿನಲ್ಲಿ ತ್ರಿವಳಿ ತಲಾಖ್? ಪದ್ಧತಿಗೆ ಸಮ್ಮತಿ ಇತ್ತು. ಮೂರು ಬಾರಿ ತಲಾಖ್ ಹೇಳುವ ಮೂಲಕ ಪತ್ನಿಗೆ ವಿಚ್ಛೇದನ ಕೊಡಬಹುದಾಗಿತ್ತು. ಇಸ್ಲಾಮ್ ನ ಮೂಲ ಕಾನೂನಿನಲ್ಲಿ ತ್ರಿವಳಿ ತಲಾಖ್ ಗೆ ಬೇರೆಯೇ ವಿಧಿವಿಧಾನಗಳು ಇವೆ. ಆದರೂ ಈಗೀಗ ಈ ಕಾನೂನು ದುರ್ಬಳಕೆಯಾಗಿ ಇನ್ಸ್ ?ಟಂಟ್ ತಲಾಖ್ (ತತ್ ಕ್ಷಣವೇ ನೀಡುವ ವಿಚ್ಛೇದನ) ಆಗಿಬಿಟ್ಟಿದೆ. ಮುಸ್ಲಿಂ ಪುರುಷರು ಇದನ್ನು ದುರ್ಬಳಕೆ ಮಾಡುವುದರಿಂದ ಮದುವೆಯಾದ ಮುಸ್ಲಿಂ ಮಹಿಳೆಯರಿಗೆ ಇದರಿಂದ ತೀವ್ರ ತೊಂದರೆಯಾಗುತ್ತಿತ್ತು.
ಇದನ್ನು ಮನಗಂಡ ಕೇಂದ್ರ ಸರ್ಕಾರ ಈ ಸಾಮಾಜಿಕ ಪಿಡುಗನ್ನು ಹೊಡೆದೋಡಿಸಲು ತ್ರಿವಳಿ ತಲಾಖ್ ಮಸೂದೆಯನ್ನು ಸದನದಲ್ಲಿ ಮಂಡಿಸಿ ಅನುಮೋದನೆ ಪಡೆಯಿತು. ಇದಕ್ಕೆ ರಾಷ್ಟ್ರಪತಿಗಳ ಒಪ್ಪಿಗೆ ಕೂಡ ಸಿಕ್ಕಿದ್ದು ಇನ್ನು ಮುಂದೆ ತ್ರಿವಳಿ ತಲಾಖ್ ಹೇಳಿದರೆ ಕ್ರಿಮಿನಲ್ ಅಪರಾಧವಾಗಲಿದೆ. ಲೋಕಸಭೆಯಲ್ಲಿ ಮುಸ್ಲಿಂ ಮಹಿಳೆಯರ (ಮದುವೆಯ ಹಕ್ಕುಗಳ ರಕ್ಷಣೆ) ಮಸೂದೆ ಕಳೆದ ವಾರ ಅನುಮೋದನೆಗೊಂಡಿತ್ತು.
ಇನ್ನು ಮುಂದೆ ಮುಸಲ್ಮಾನ ಧರ್ಮದಲ್ಲಿ ಪತ್ನಿಗೆ ತ್ರಿವಳಿ ತಲಾಖ್ ಹೇಳಿದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಆಗುತ್ತದೆ.