ನವದೆಹಲಿ: ಫೆಬ್ರವರಿ 27 ರಂದು ಅಂತಾರಾಷ್ಟ್ರೀಯ ಗಡಿ ರೇಖೆಯಲ್ಲಿ ಪಾಕಿಸ್ತಾನದ ಎಫ್ -16 ಯುದ್ದವಿಮಾನ ಹೊಡೆದುರುಳಿಸಿದ್ದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮನ್ ಅವರಿಗೆ ವೀರ ಚಕ್ರ ಪ್ರಶಸ್ತಿಯನ್ನು ಸರ್ಕಾರ ಘೋಷಿಸುವ ಸಾಧ್ಯತೆ ಇದೆ.
ಐದು ಮಿರಾಜ್ -2000 ಯುದ್ಧ ವಿಮಾನಗಳು ಪಾಕಿಸ್ತಾನಕ್ಕೆ ನುಗ್ಗಿ ಅಲ್ಲಿನ ಉಗ್ರ ನೆಲೆಗಳನ್ನು ಧ್ವಂಸಗೊಳಿಸಿದ ನಂತರ ಪಾಕಿಸ್ತಾನದ ಎಫ್ -16 ಜೆಟ್ ವಿಮಾನ ಹೊಡೆದುರುಳಿದ ಶೌರ್ಯಕ್ಕಾಗಿ ವಾಯುಪಡೆಯ ಈ ಪದಕವನ್ನು ನೀಡಲಾಗುತ್ತಿದೆ.
ಫೆಬ್ರವರಿ 14 ರಂದು ನಡೆದ ಪುಲ್ವಾಮಾ ದಾಳಿಯ ಪ್ರತೀಕಾರವಾಗಿ ಭಾರತೀಯ ಸೇನಾಪಡೆ ಪಾಕಿಸ್ತಾನದ ಬಾಲಕೋಟ್ ನಲ್ಲಿ ಸರ್ಜಿಕಲ್ ದಾಳಿ ನಡೆಸಿ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿತ್ತು. ಬಳಿಕ ಭಾರತೀಯ ವಾಯುಗಡಿ ದಾಟಿ ಬಂದ ಪಾಕಿಸ್ತಾನದ ಎಫ್- 16 ಯುದ್ಧ ವಿಮಾನ ಜೊತೆಗೆ ಕಾಳಗ ನಡೆಸಿದ್ದ ಅಭಿನಂದನ್ ಅದನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದರು.
ಆ ಬಳಿಕ ಪ್ಯಾರಾಚೂಟ್ ಮೂಲಕ ಪಾಕಿಸ್ತಾನದ ನೆಲಕ್ಕೆ ಧುಮುಕ್ಕಿದ್ದ ಅವರನ್ನು ಅಲ್ಲಿನ ಸೇನೆ ಬಂಧಿಸಿತ್ತು. 60 ಗಂಟೆಗಳ ನಂತರ ಮಾರ್ಚ್ 1 ರಂದು ಭಾರತಕ್ಕೆ ವಾಪಸ್ ಕಳುಹಿಸಿತ್ತು.ವೀರಚಕ್ರ ಯೋಧರಿಗೆ ನೀಡಲಾಗುವ ಮೂರನೇಯ ಅತ್ಯುನ್ನತ ಪ್ರಶಸ್ತಿಯಾಗಿದೆ.