ಉಪ್ಪಳ: ದಿ.ಪಟೇಲ್ ರಾಮಯ್ಯ ಬಲ್ಲಾಳರು ಪೈವಳಿಕೆ ಗ್ರಾಮದ ಜನರಿಗೆ ಪ್ರಿಯರಾಗಿದ್ದರು. ಅವರ ಸಾಮಾಜಿಕ ನಿಷ್ಠೆ, ಅವರಿಗಿದ್ದ ಗ್ರಾಮ ಪ್ರಗತಿಯ ಚಿಂತನೆ ಇತ್ಯಾದಿಗಳನ್ನು ಇಂದಿಗೂ ಅನೇಕ ಹಿರಿಯರು ಸ್ಮರಿಸಿಕೊಳ್ಳುತ್ತಿದ್ದಾರೆ. ಅವರ ಹೆಸರಿನಲ್ಲಿ ಅವರ ಪುತ್ರ ಸಿ. ರಾಘವ ಬಲ್ಲಾಳ್ ಅವರು ಪುಸ್ತಕ ಭಂಡಾರ ಹಾಗೂ ವಾಚನಾಲಯವನ್ನು ಪೈವಳಿಕೆಯಲ್ಲಿ ಸ್ಥಾಪಿಸುವ ಮೂಲಕ ಪಟೇಲರ ಹೆಸರು ಶಾಶ್ವತವಾಗಿ ಉಳಿಯುವಂತೆ ಮಾಡಿರುವುದು ಶ್ಲಾಘನೀಯ ಎಂದು ಪೈವಳಿಕೆ ಪಂಚಾಯತಿ ಅಧ್ಯಕ್ಷೆ ಭಾರತೀ ಜೆ.ಶೆಟ್ಟಿ ಅಭಿಪ್ರಾಯಪಟ್ಟರು.
ಪೈವಳಿಕೆ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಸಮೀಪ ರಾಜ್ಯ ಪ್ರಶಸ್ತಿ ಪಡೆದ ನಿವೃತ್ತ ಅಧ್ಯಾಪಕ ಸಿ.ರಾಘವ ಬಲ್ಲಾಳ್ ಅವರು ತಮ್ಮ ತಂದೆ-ತಾಯಿಯರ ಹೆಸರಲ್ಲಿಸ್ಥಾಪಿಸಿದ ಪಟೇಲ್ ರಾಮಯ್ಯ ಬಲ್ಲಾಳ್ ಹಾಗೂ ಲಕ್ಷ್ಮೀ ಅಮ್ಮ ಸ್ಮಾರಕ ಪುಸ್ತಕ ಭಂಡಾರ ಮತ್ತು ವಾಚನಾಲಯವನ್ನು ಇತ್ತೀಚೆಗೆ ಉದ್ಘಾಟಿಸಿ ಅವರು ಮಾತನಾಡಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎಸ್.ವಿ. ಭಟ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೇರಳ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ. ಎಂ. ರಾಮ, ಪೈವಳಿಕೆ ಗ್ರಾಮಪಂಚಾಯತಿ ಉಪಾಧ್ಯಕ್ಷೆ ಸುನೀತ ವಲ್ಟಿ ಡಿಸೋಜ, ಮಂಜೇಶ್ವರ ಬ್ಲಾಕ್ ಪಂಚಾಯತಿ ಸದಸ್ಯ ಪ್ರಸಾದ್ ರೈ ಕಯ್ಯಾರು, ತಾಲೂಕು ಲೈಬ್ರರಿ ಕೌನ್ಸಿಲ್ ಕಾರ್ಯದರ್ಶಿ ಅಹಮ್ಮದ್ ಹುಸೇನ್ ಪಿ.ಕೆ, ವಿಶ್ರಾಂತ ಪ್ರಾಂಶುಪಾಲ ಪ್ರೊ.ಪಿ.ಎನ್.ಮೂಡಿತ್ತಾಯ, ಸಿ. ರಾಘವ ಬಲ್ಲಾಳ್ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು. ತಾಲೂಕು ಲೈಬ್ರರಿ ಕೌನ್ಸಿಲ್ ಮಂಜೇಶ್ವರದ ಅಧ್ಯಕ್ಷ, ನಿವೃತ್ತ ಶಿಕ್ಷಕ ಎಸ್.ನಾರಾಯಣ ಭಟ್ ಹಾಗೂ ಉಷಾದೇವಿ ಉಪಸ್ಥಿತರಿದ್ದರು.
ಕಾಸರಗೋಡು ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಅಧ್ಯಾಪಕ ಎ.ವಿ.ರಾಧಾಕೃಷ್ಣ ಬಲ್ಲಾಳ್ ಸ್ವಾಗತಿಸಿ, ರಾಮಚಂದ್ರ ಭಟ್ ಪಿ. ಧರ್ಮತ್ತಡ್ಕ ವಂದಿಸಿದರು. ನಿವೃತ್ತ ಶಿಕ್ಷಕಿ ಶ್ರೀಕುಮಾರಿ ಟೀಚರ್ ಕಾರ್ಯಕ್ರಮ ನಿರೂಪಿಸಿದರು. ಹಲವು ದಾನಿಗಳು ಈ ಸಂದಭದಲ್ಲಿ ನೂತನ ಗ್ರಂಥಾಲಯಕ್ಕೆಪುಸ್ತಕಗಳನ್ನು ಉದಾರವಾಗಿ ನೀಡಿದರು.