ನವದೆಹಲಿ: ಜಮ್ಮು-ಕಾಶ್ಮೀರ, ಲಡಾಕ್ ಪ್ರದೇಶಗಳಿಗೆ ಕೇಂದ್ರಾಡಳಿತ ಸ್ಥಾನಮಾನ ನೀಡುವ ಜಮ್ಮು-ಕಾಶ್ಮೀರ ಪುನಾರಚನೆ ಮಸೂದೆ ಲೋಕಸಭೆಯಲ್ಲಿ ಅಂಗೀಕಾರಗೊಂಡಿದ್ದು, ಕಾನೂನಾಗಿ ಜಾರಿಗೊಂಡಿದೆ.
ನಿನ್ನೆ ನಡೆದ ಕಲಾಪದಲ್ಲಿ ಗೃಹ ಸಚಿವ ಅಮಿತ್ ಶಾ ಮಸೂದೆ ಮೇಲಿನ ಚರ್ಚೆ ವೇಳೆ ವಿಪಕ್ಷ ನಾಯಕರ ಆಕ್ಷೇಪಗಳಿಗೆ ಸಮರ್ಥ ಉತ್ತರ ನೀಡಿದರು. ಈ ನಡುವೆ ಲೋಕಸಭೆಯಲ್ಲಿ ಸರ್ಕಾರದ ನಡೆಯನ್ನು ವಿರೋಧಿಸುವ ಭರದಲ್ಲಿ ಕಾಂಗ್ರೆಸ್ ನಾಯಕ ಅಧಿರಂಜನ್ ಚೌಧರಿ ವಿವಾದ ಉಂಟು ಮಾಡಿದರು. ಸುಧೀರ್ಘ ಚರ್ಚೆಯ ಬಳಿಕ ಲೋಕಸಭೆಯಲ್ಲಿ ಮಸೂದೆ ಅಂಗೀಕಾರಗೊಂಡಿದ್ದು, ಕಾನೂನಾಗಿ ಜಾರಿಯಾಗಿದೆ. ಆ.05 ರ ಕಲಾಪದಲ್ಲಿ ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರಗೊಂಡಿತ್ತು.
ಮಸೂದೆ ಸಂಬಂಧ ಕಾಂಗ್ರೆಸ್ ನಲ್ಲೇ ಒಡಕು!
ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದಂತೆ ಸರ್ಕಾರದ ನಡೆಗೆ ಪಕ್ಷಾತೀತವಾಗಿ ಬೆಂಬಲ ವ್ಯಕ್ತವಾಗತೊಡಗಿದ್ದು, ರಾಜ್ಯಸಭೆಯಲ್ಲಿ ವಿಪಕ್ಷಗಳ ನಡುವೆಯೇ ಒಡಕು ಮೂಡಿದರೆ, ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಲ್ಲೇ ಒಡಕು ಕಾಣಿಸಿಕೊಂಡಿದೆ.
ಮಸೂದೆ ಮಂಡನೆಯಾಗುತ್ತಿದ್ದಂತೆಯೇ ಟ್ವೀಟ್ ಮಾಡಿದ ಕಾಂಗ್ರೆಸ್ ನ ಯುವ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ, ಜಮ್ಮು-ಕಾಶ್ಮೀರ ಪುನಾರಚನೆ ಮಸೂದೆಯನ್ನು ನಾನು ಬೆಂಬಲಿಸುತ್ತೇನೆ, ಸಾಂವಿಧಾನಿಕ ಪ್ರಕ್ರಿಯೆ ಮೂಲಕ ಇದನ್ನು ಮಾಡಿದ್ದರೆ ಮತ್ತಷ್ಟು ಸೂಕ್ತವಾಗಿರುತ್ತಿತ್ತು. ಆಗ ಯಾವುದೇ ಆಕ್ಷೇಪಗಳಿಗೆ ಜಾಗವಿರುತ್ತಿರಲಿಲ್ಲ. ಆದರೂ ಕೇಂದ್ರ ಸರ್ಕಾರದ ನಡೆ ದೇಶದ ಹಿತಾಸಕ್ತಿಗೆ ಅನುಗುಣವಾಗಿರುವುದರಿಂದ ಈ ಮಸೂದೆಯನ್ನು ಬೆಂಬಲಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
370 ರದ್ದು ಮಾಡಿದ್ದಕ್ಕೆ ಇತಿಹಾಸ ಮೋದಿಯನ್ನು ಸ್ಮರಿಸಲಿದೆ:
ಮಸೂದೆ ಮೇಲಿನ ಚರ್ಚೆ ವೇಳೆ ಮಾತನಾಡಿರುವ ಗೃಹ ಸಚಿವ ಅಮಿತ್ ಶಾ, ಆರ್ಟಿಕಲ್ 370 ನ್ನು ರದ್ದುಗೊಳಿಸಿದ್ದಕ್ಕಾಗಿ ಇತಿಹಾಸ ಮೋದಿಯನ್ನು ಸ್ಮರಿಸಲಿದೆ ಎಂದು ಹೇಳಿದ್ದಾರೆ.