ಕುಂಬಳೆ: ಜಿಲ್ಲಾ ಮೊಗೇರ ಸರ್ವೀಸ್ ಸೊಸೈಟಿ, ರಾಜ್ಯ ಮೊಗೇರ ಸರ್ವೀಸ್ ಸೊಸೈಟಿ, ಕಿದೂರು ಕುಂಟಂಗೇರಡ್ಕ ಮೊಗೇರ ಸರ್ವೀಸ್ ಸೊಸೈಟಿ ಸಂಯುಕ್ತಾಶ್ರದಲ್ಲಿ ಕುಂಟಂಗೇರಡ್ಕ ರಾಜೀವ ಗಾಂಧಿ ಸಭಾಂಗಣದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಮೊಗೇರ ಆಟಿದ ಕೂಟ 2019 ಕಾರ್ಯಕ್ರಮ ಭಾನುವಾರ ಸಂಪನ್ನಗೊಂಡಿತು.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಕುಲದೈವಗಳಿಗೆ ಕಲಶ ಪ್ರಾರ್ಥನೆ ನಡೆಯಿತು. ಬಳಿಕ ಪ್ರಾದೇಶಿಕ ಸಮಿತಿ ಅಧ್ಯಕ್ಷ ಅನೀಶ್ ಕುಂಟಂಗೇರಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಕುಂಬಳೆ ಗ್ರಾ.ಪಂ.ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್. ಉದ್ಘಾಟಿಸಿದರು. ಬಳಿಕ 9.30 ರಿಂದ 11.30ರ ವರೆಗೆ ವಿವಿಧ ತಂಡಗಳಿಂದ ವೈವಿಧ್ಯಮಯ ನೃತ್ಯ ಪ್ರದರ್ಶನಗಳು ನಡೆಯಿತು. ಬಳಿಕ ನಡೆದ ವಿಚಾರಗೋಷ್ಠಿಯಲ್ಲಿ ಮೊಗೇರರು ಮತ್ತು ಆಟಿ ಆಚರಣೆಗಳು ಎಂಬ ವಿಷಯದಲ್ಲಿ ವಾಗ್ಮಿ, ಚಲನಚಿತ್ರ ನಟ ನಂದರಾಜ ಸಂಕೇಶ ಸುಳ್ಯ ಉಪನ್ಯಾಸ ನೀಡಿದರು. ಆ ಬಳಿಕ ನಿತಿನ್ ಗೋಳಿಕಟ್ಟೆ ಅವರಿಂದ ಹಾಸ್ಯ ಲಹರಿ ಪ್ರಸ್ತುತಿಗೊಂಡಿತು. ಮೊಗೇರರ ಮೂಲ ನೃತ್ಯ ದುಡಿ ನಲಿಕೆಯನ್ನು ಮೋಹನ ಗೋಳಿಕಟ್ಟೆ ಮತ್ತು ತಂಡ, ಚೆನ್ನು ನಲಿಕೆಯನ್ನು ಮೊಗೇರ ಸರ್ವೀಸ್ ಸೊಸೈಟಿ ಕುಂಟಂಗೇರಡ್ಕ ಪ್ರಾದೇಶಿಕ ಸಮಿತಿಯವರು ಪ್ರದರ್ಶಿಸಿದರು.
ಮಧ್ಯಾಹ್ನ ಆಟಿದ ವನಸ್ ತೆನಸ್ ಊಟೋಪಚಾರದಲ್ಲಿ ಹಲಸಿನ ಸೊಳೆಯ ಗಸಿ, ಹುರುಳಿ ಚಣ್ನಿ, ಹಲಸಿನ ಬೀಜದ ಗಸಿ, ತಿಮರೆ ಚಣ್ನಿ, ಉಪ್ಪಿನಕಾಯಿ, ಪಾಯಸ, ತಗತೆ ಒಳಗೊಂಡ ಗಂಜಿ ಊಟ ವ್ಯವಸ್ಥೆಗೊಳಿಸಲಾಗಿತ್ತು. ಅಪರಾಹ್ನ ವಿವಿಧ ಜಾನಪದ ನೃತ್ಯ ಪ್ರದರ್ಶನ ನಡೆಯಿತು. ಮೋಹನ ಯು.ಮಂಜೇಶ್ವರ ಅವರಿಂದ ಯೋಗ ಪ್ರದರ್ಶನ, ಮಹಿಳೆಯರಿಗೆ ಲಕ್ಕೀಗೇಮ್, ಬಾಟ್ಲಿಗೆ ನೀರು ತುಂಬಿಸುವುದು, ಶಾಲಾ ವಿದ್ಯಾರ್ಥಿಗಳಿಗೆ ಆಟೋಟ ಸ್ಪರ್ಧೆಗಳು ನಡೆಯಿತು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಗಣ್ಯರು ಭಾಗವಹಿಸಿದರು.