ನವದೆಹಲಿ: ಆರ್ಥಿಕ ಬಿಕ್ಕಟ್ಟು ಮತ್ತು ಜಿಡಿಪಿ ಅಭಿವೃದ್ಧಿ ದರ ಕುಸಿತಕ್ಕೆ ಸಂಬಂಧಿಸಿದ ವರದಿ ಬಹಿರಂಗವಾದ ಬೆನ್ನಲ್ಲೇ ಈ ಸಂಬಂಧ ಕೇಂದ್ರ ಸರ್ಕಾರ ಪ್ರತಿಕ್ರಿಯೆ ನೀಡಿದ್ದು, ಜಿಡಿಪಿ ದರ ಕುಸಿತಕ್ಕೆ ಆಂತರಿಕ ಮತ್ತು ಜಾಗತಿಕ ವಹಿವಾಟಿನ ಅಂಶಗಳೇ ಕಾರಣ ಎಂದು ಹೇಳಿದೆ.
ಈ ಕುರಿತಂತೆ ಇದೇ ಮೊದಲ ಬಾರಿಗೆ ಹೇಳಿಕೆ ನೀಡಿರುವ ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಕೆ.ವಿ.ಸುಬ್ರಮಣಿಯನ್ ಅವರು, ಆರ್ಥಿಕ ಹಿನ್ನಡೆಯಾಗಿದೆ ಸತ್ಯ. ಆದರೆ ಆದರೆ ಇದು ಆರ್ಥಿಕ ಕುಸಿತವಲ್ಲ. ಪ್ರಬಲ ಸರ್ಕಾರವಿದೆ. ಈ ಸಂಬಂಧ ಸೂಕ್ತ ಕ್ರಮಗಳನ್ನು ಕೈಗೊಳ್ಳಲಿದೆ. ಇದೇ ಕಾರಣಕ್ಕಾಗೆ ಬ್ಯಾಂಕ್ ಗಳ ವಿಲೀನ ಕಾರ್ಯಕ್ಕೆ ಕೇಂದ್ರ ಸರ್ಕಾರ ವರ್ಷಗಳ ಹಿಂದೆಯೇ ಚಾಲನೆ ನೀಡಿತ್ತು. ಆದರ ಮುಂದುವರಿದ ಭಾಗಕ್ಕೂ ಚಾಲನೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಜೊತೆಗೆ ಜಿಡಿಪಿ ದರ ಕುಸಿತಕ್ಕೆ ಆಂತರಿಕ ಮತ್ತು ಜಾಗತಿಕ ವಹಿವಾಟಿನ ಅಂಶಗಳೇ ಕಾರಣ ಎಂದು ಹೇಳಿರುವ ಕೆ.ವಿ.ಸುಬ್ರಮಣಿಯನ್ ಅವರು, ಕೆಲ ಆಂತರಿಕ ವಿಚಾರಗಳು ಮತ್ತು ಭಾರಕತದ ಜಾಗತಿಕ ವಹಿವಾಟು ಈ ಹಿನ್ನಡೆಗೆ ಕಾರಣ. ಆದರೆ ಶೀಘ್ರದಲ್ಲೇ ನಾವು ಮತ್ತೆ ಹಳೆಯ ಅಥವಾ ಅದಕ್ಕಿಂತಲೂ ಹೆಚ್ಚಿನ ಪ್ರಮಾಣದ ಆರ್ಥಿಕ ಅಭಿವೃದ್ಧಿ ದರ ಸಾಧಿಸಲಿದ್ದೇವೆ. ಶೀಘ್ರದಲ್ಲೇ ಗರಿಷ್ಟ ಮಟ್ಟದ ಜಿಡಿಪಿ ಅಭಿವೃದ್ಧಿ ದರವನ್ನು ಕಾಣಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ಆರ್‍ಬಿಐ ತನ್ನ ವಾರ್ಷಿಕ ವರದಿಯಲ್ಲಿ ಬ್ಯಾಂಕಿಂಗ್ ಮತ್ತು ಬ್ಯಾಂಕೇತರ ಕ್ಷೇತ್ರಗಳೆರಡನ್ನೂ ಬಲಪಡಿಸಲು ಶಿಫಾರಸು ಮಾಡಿದೆ, ಮೂಲಸೌಕರ್ಯ ಖರ್ಚು ಮತ್ತು ಕಾರ್ಮಿಕ ಕಾನೂನುಗಳು ಮತ್ತು ತೆರಿಗೆ ವಿಧಿಸುವಿಕೆಯಲ್ಲಿ ರಚನಾತ್ಮಕ ಸುಧಾರಣೆಗಳ ಅನುಷ್ಠಾನಕ್ಕೆ ಒತ್ತು ನೀಡಿದೆ ಎಂದು ಹೇಳಿದರು.
ಆರ್ಥಿಕ ಹಿಂಜರಿತವನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರವು ಕಳೆದ ವಾರ ವಿದೇಶಿ ಮತ್ತು ದೇಶೀಯ ಹೂಡಿಕೆದಾರರ ಷೇರುಗಳ ಮೇಲಿನ ಬಂಡವಾಳದ ಲಾಭದ ಮೇಲಿನ ಶುಲ್ಕವನ್ನು ತೆಗೆದುಹಾಕುವುದು, ಸೇರಿದಂತೆ ಹಲವಾರು ಕ್ರಮಗಳನ್ನು ತೆಗೆದುಕೊಂಡಿತು. ಇದರ ಭಾಗವಾಗಿ ಈಗ 5-ಟ್ರಿಲಿಯನ್ ಡಾಲರ್ ಆರ್ಥಿಕ ಗುರಿಯನ್ನು ಸಾಧಿಸುವ ಉದ್ದೇಶದಿಂದ ಬ್ಯಾಂಕಿಂಗ್ ಕ್ಷೇತ್ರವನ್ನು ಪುನರುಜ್ಜೀವನಗೊಳಿಸುವ ಸಲುವಾಗಿ ಸೀತಾರಾಮನ್ ಬ್ಯಾಂಕುಗಳ ವಿಲೀನಗಳ ಸರಣಿಯನ್ನು ಘೋಷಿಸಿದರು. ಅಮೆರಿಕ-ಚೀನಾ ವ್ಯಾಪಾರ ಮಾತುಕತೆಗಳಲ್ಲಿ ಸಕಾರಾತ್ಮಕ ಬೆಳವಣಿಗೆಗಳ ನಂತರ ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯ 12 ಪೈಸೆ ಏರಿಕೆ ಕಂಡು 71.67 ಕ್ಕೆ ತಲುಪಿದೆ.