ಮಂಜೇಶ್ವರ: ಸಂಕುಚಿತ ಚೌಕಟ್ಟನ್ನು ಮೀರಿದ ವಿಶಾಲತೆಯ ವೈಕ್ತಿತ್ವದವರಾದ ರಾಷ್ಟ್ರಕವಿ ಗೋವಿಂದ ಪೈಗಳು ಬಹುತ್ವದ ಪ್ರತೀಕವಾಗಿದ್ದರು. ವರ್ಣ ರಂಜಿತ ಬದುಕಿನ ಪೈಗಳ ಸಾಹಿತ್ಯ-ಬರಹ, ಸಂದೇಶಗಳನ್ನು ಹೊಸ ತಲೆಮಾರಿಗೆ ಮುಟ್ಟಿಸುವ ಬಹುಮುಖದ ಚಿಂತನೆಗಳು ಆಗಬೇಕು ಎಂದು ಹಿರಿಯ ವೈದ್ಯ, ಸಾಹಿತಿ ಡಾ.ರಮಾನಂದ ಬನಾರಿ ಅವರು ತಿಳಿಸಿದರು.
ಮಂಜೇಶ್ವರ ಗೋವಿಂದ ಪೈ ಸ್ಮಾರಕ ಗಿಳಿವಿಂಡು ಆಶ್ರಯದಲ್ಲಿ ಶ್ರಾವಣ ಮಾಸಾಚರಣೆಯ ಅಂಗವಾಗಿ ಶನಿವಾರ ಅಪರಾಹ್ನ ಗಿಳಿವಿಮಡು ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶೇಷ ಶ್ರಾವಣ ಕಾವ್ಯಾಲಾಪ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಿವೃತ್ತ ಪ್ರಾಧ್ಯಾಪಕ ಕೃಷ್ಣಪ್ಪ ಪೂಜಾರಿ, ಗಿಳಿವಿಂಡು ಸ್ಮಾರಕದ ಆಡಳಿತಾಧಿಕಾರಿ ಡಾ.ಕೆ.ಕಮಲಾಕ್ಷ ಉಪಸ್ಥಿತರಿದ್ದರು.
ಬಳಿಕ ಮಂದಾರ ಕೇಶವ ಭಟ್ ರಚಿಸಿರುವ ಮಂದಾರ ರಾಮಾಯಣದ ಆಯ್ದ ಭಾಗಗಳ ವಾಚನ-ಪ್ರವಚನ ನಡೆಯಿತು. ಗೋವಿಂದ ಪೈ ಸ್ಮಾರಕ ಟ್ರಸ್ಟ್ ಸದಸ್ಯ ಸುಭಾಶ್ಚಂದ್ರ ಕಣ್ವತೀರ್ಥ ಮಂದಾರ ರಾಮಾಯಣದ ವಾಚನ ನಡೆಸಿದರು. ಹಿರಿಯ ಪತ್ರಕರ್ತ, ಸಾಹಿತಿ ಮಲಾರು ಜಯರಾಮ ರೈ ಪ್ರವಚನ ನೀಡಿದರು.
ಈ ಸಂದರ್ಭ ಮಾತನಾಡಿದ ಮಲಾರು ಜಯರಾಮ ರೈ ಅವರು ಮಾತನಾಡಿ, ಕರುಣೆ, ಶಾಂತಿ, ಸೌಹಾರ್ಧತೆ ಮತ್ತು ಸಹಬಾಳ್ವೆಯ ಆದರ್ಶ ಮೂರ್ತಿಯಾದ ಶ್ರೀರಾಮಚಂದ್ರನ ಜೀವನ ಪಥ ಇಂದಿಗೂ ಅನುಸರಣೀಯವಾದುದು. ಪ್ರತಿಯೊಬ್ಬ ವ್ಯಕ್ತಿಯೊಳಗಿನ ತುಮುಲ-ಸಂಘರ್ಷಗಳು ರಾಮಾಯಣದ ರೂಪಕಗಳಾಗಿ ನಮ್ಮಿದಿರು ಸವಾಲುಗಳಿಗೆ ಉತ್ತರ ನೀಡುತ್ತದೆ. ಆದರೆ ಅದನ್ನು ಅಥ್ರ್ಯಸುವ ದೃಷ್ಟಿ ನಮ್ಮಲ್ಲಿರಬೇಕು ಎಂದು ತಿಳಿಸಿದ ಅವರು, ಮಂದಾರ ಕೇಶವ ಭಟ್ ಅವರು ತುಳು ಭಾಷೆಯಲ್ಲಿ ನಿರೂಪಿಸಿರುವ ಮಂದಾರ ರಾಮಾಯಣ ಹಿಂದಿನ ತಲೆಮಾರಿನ ಜನಜೀವನದ ಮಾರ್ಗದರ್ಸಿಯಾಗಿ ಭವ್ಯ ತುಳುನಾಡಿನ ಚರಿತ್ರೆಯನ್ನು ನೆನಪಿಸುತ್ತದೆ ಎಮದು ತಿಳಿಸಿದರು.
ಗೋವಿಂದ ಪೈ ಸ್ಮಾರಕ ಗಿಳಿವಿಂಡಿನ ಆಡಳಿತಾಧಿಕಾರಿ ಡಾ.ಕೆ.ಕಮಲಾಕ್ಷ ವಂದಿಸಿದರು.