ಬದಿಯಡ್ಕ: ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಶನ್ (ಎಕೆಪಿಎ) ಬದಿಯಡ್ಕ ಘಟಕ ವತಿಯಿಂದ ಬದಿಯಡ್ಕ ಗ್ರಾಮಪಂಚಾಯಿತಿಯ ಬಾಂಜತ್ತಡ್ಕ ಉದಯಗಿರಿ ಶ್ರೀ ಶಂಕರನಾರಾಯಣ ಅನುದಾನಿತ ಕಿರಿಯ ಬುನಾದಿ ಶಾಲೆಗೆ ಮಕ್ಕಳ ಮಧ್ಯಾಹ್ನದೂಟದ ಸಿದ್ಧತೆಗಾಗಿ ಗ್ರೈಂಡರ್ ಅನ್ನು ಕೊಡುಗೆಯಾಗಿ ನೀಡಲಾಯಿತು. ಹಿರಿಯ ಛಾಯಾಗ್ರಾಹಕ ಬಾಲಸುಬ್ರಹ್ಮಣ್ಯ ಬೊಳುಂಬು ಶಾಲಾ ಅಧಿಕೃತರಿಗೆ ಹಸ್ತಾಂತರಿಸಿ ಮಾತನಾಡಿ, ಕವಿ ಕಯ್ಯಾರ ಕಿಞ್ಞಣ್ಣ ರೈಯವರು ಗ್ರಾಮಪಂಚಾಯಿತಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಸ್ಥಾಪಿಸಲ್ಪಟ್ಟ ಶಾಲೆಯು ಅನೇಕ ಪ್ರತಿಭಾವಂತರನ್ನು ನಾಡಿಗೆ ನೀಡಿದ ಹಿರಿಮೆಯಿದೆ. ಇಂತಹ ಒಂದು ಶಾಲೆಯು ಇನ್ನೂ ಅಭಿವೃದ್ಧಿಯತ್ತ ಸಾಗಬೇಕು. ಸಂಘಟನೆಯ ವತಿಯಿಂದ ನೀಡಿದ ಈ ಕೊಡುಗೆಯ ಸದುಪಯೋಗವಾಗಲಿ ಎಂದರು.
ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಕುಸುಮ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಎಕೆಪಿಎ ಬದಿಯಡ್ಕ ಘಟಕದ ಅಧ್ಯಕ್ಷ ಅಪ್ಪಣ್ಣ ಸೀತಾಂಗೋಳಿ ಮಾತನಾಡಿ ಪೋಷಕಾಂಶಯುಕ್ತ, ಉತ್ತಮವಾದ ಆಹಾರವನ್ನು ಸೇವಿಸಿದರೆ ಮಾತ್ರ ನಮ್ಮ ಆರೋಗ್ಯವು ಸ್ಥಿರವಾಗಿರಲು ಸಾಧ್ಯವಿದೆ. ಮಧ್ಯಾಹ್ನದ ಊಟವು ಪ್ರತಿಯೊಬ್ಬ ಮನುಷ್ಯನಿಗೂ ಪ್ರಧಾನವಾಗಿದೆ. ಗ್ರೈಂಡರ್ ಮೂಲಕ ರುಚಿಕರವಾದ ಊಟ ಮಕ್ಕಳಿಗೆ ಲಭ್ಯವಾಗಲಿ ಎಂದು ಹಾರೈಸಿದರು. ಶಾಲೆಯ ಹಿತಚಿಂತಕರುಗಳಾದ ರಾಮ ಮಾಸ್ತರ್ ಇಕ್ಕೇರಿ, ಪುರುಷೋತ್ತಮ ಭಟ್ ಮಿಂಚಿನಡ್ಕ, ಎಕೆಪಿಎ ಬದಿಯಡ್ಕ ಘಟಕದ ಕಾರ್ಯದರ್ಶಿ ಶ್ಯಾಮಪ್ರಸಾದ ಸರಳಿ, ಕೋಶಾಧಿಕಾರಿ ನಾರಾಯಣ ಓಡಂಗಲ್ಲು, ಸದಸ್ಯರುಗಳಾದ ಹರ್ಷಕುಮಾರ್ ಕೀರಿಕ್ಕಾಡು, ಮುರಲೀಧರ ತಲ್ಪಣಾಜೆ ಶುಭಹಾರೈಸಿ ಮಾತನಾಡಿದರು. ಶಾಲಾ ಅಧ್ಯಾಪಕ ಶ್ರೀಧರ ಪ್ರಸಾದ ಬೇಳ ಸ್ವಾಗತಿಸಿ, ಮುಖ್ಯೋಪಾಧ್ಯಾಯಿನಿ ಅಂಬಿಕಾ ಸರಸ್ವತಿ ವಂದಿಸಿದರು. ಶಾಲಾ ವಿದ್ಯಾರ್ಥಿಗಳು, ಪಾಲಕರು, ಅಧ್ಯಾಪಕ ವೃಂದದವರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.
ಅಭಿಮತ:
ಗ್ರಾಮೀಣ ಪ್ರದೇಶದ ಶಾಲೆಯ ಬಗ್ಗೆ ಕಾಳಜಿಯನ್ನಿಟ್ಟು, ಮಕ್ಕಳ ಹಸಿವನ್ನು ನೀಗಿಸುವ ಸಲುವಾಗಿ ಗ್ರೈಂಡರ್ ಅನ್ನು ಕೊಡುಗೆಯಾಗಿ ನೀಡಿ ಎಕೆಪಿಎ ಛಾಯಾಗ್ರಾಹಕರ ಸಂಘಟನೆಯು ಮಾದರಿ ಕಾರ್ಯವನ್ನು ಮಾಡಿದೆ. ಈ ರೀತಿ ಎಲ್ಲಾ ಸಂಘಟನೆಗಳೂ ಊರಿನ ಪ್ರಗತಿಗೆ ಪೂರಕವಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ಅನೇಕ ಸಂಘಟನೆಗಳು ಸಾಮಾಜಿಕ ಕಳಕಳಿಯಿಂದ ಜನೋಪಯೋಗಿ ಕೆಲಸಗಳನ್ನು ಮಾಡುತ್ತಿರುವುದನ್ನು ಇಂದು ನಾವು ಕಾಣಬಹುದಾಗಿದೆ.
- ರಾಮಮಾಸ್ತರ್ ಇಕ್ಕೇರಿ. ಶಾಲಾ ಹಿತಚಿಂತಕ