ನವದೆಹಲಿ: ರಸ್ತೆ ಸಂಚಾರ ನಿಯಮ ಉಲ್ಲಂಘನೆಗಳಿಗೆ ಭಾರಿ ದಂಡ ವಿಧಿಸುವಂತಹ ಮೋಟಾರು ವಾಹನ ತಿದ್ದುಪಡಿ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರವಾಗಿದೆ.
ಮೋಟಾರು ವಾಹನ (ತಿದ್ದುಪತಿ) ಮಸೂದೆ 2019 ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿದೆ. ರಸ್ತೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಇಂದು ಮಂಡಿಸಿದೆ ಮಸೂದೆ ಪರ 108 ಹಾಗೂ ವಿರುದ್ಧ 13 ಮತಗಳು ಬಿದ್ದು, ಮಸೂದೆ ಅಂಗೀಕರಿಸಲ್ಪಟ್ಟಿತು.
2017ರಲ್ಲೇ ಪರಿಚಯಿಸಲಾಗಿದ್ದ ಈ ಮಸೂದೆ ಲೋಕಸಭೆಯಲ್ಲಿ ಜುಲೈ 23ರಂದೇ ಅಂಗೀಕಾರವಾಗಿತ್ತು. ಆದರೆ, ರಾಜ್ಯಸಭೆಯಲ್ಲಿ ಈ ಮಸೂದೆ ಅಂಗೀಕಾರಗೊಳ್ಳದ ಕಾರಣ 16ನೇ ಲೋಕಸಭೆಯಲ್ಲಿ ಈ ಮಸೂದೆ ಮೂಲೆ ಸೇರಿತ್ತು.
ಮೋಟಾರು ವಾಹನ ಅಪಘಾತಕ್ಕೆ ಸಂಬಂಧಿತ ಕೇಸ್ ಗಳಲ್ಲಿ ಮೃತರಾದವರಿಗೆ 5 ಲಕ್ಷ ಹಾಗೂ ತೀವ್ರವಾಗಿ ಗಾಯಗೊಂಡವರಿಗೆ 2.5 ಲಕ್ಷ ರೂಪಾಯಿ ಪರಿಹಾರ ಸೇರಿದಂತೆ ಟ್ರಾಫಿಕ್ ಸಂಬಂಧಿತ ಅಪರಾಧಗಳಲ್ಲಿ ಹೆಚ್ಚಿನ ದಂಡ ಜೊತೆಗೆ ಕಠಿಣ ಶಿಕ್ಷೆಗೆ ಗುರಿಪಡಿಸಲಾಗುತ್ತದೆ.
ದೇಶದಲ್ಲಿ 22 ರಿಂದ 25 ಲಕ್ಷ ಚಾಲಕರ ಕೊರತೆ ಇದೆ. ಈ ಕೊರತೆ ನೀಗಿಸುವ ನಿಟ್ಟಿನಲ್ಲಿ ಚಾಲಕ ತರಬೇತಿ ಸಂಸ್ಥೆಗಳನ್ನು ದೇಶಾದ್ಯಂತ ಸ್ಥಾಪಿಸಲಾಗುವುದು, ಈ ತರಬೇತಿ ಕೇಂದ್ರಗಳಿಗೆ ತಲಾ 1 ಕೋಟಿ ರೂಪಾಯಿ ಸಬ್ಸಿಡಿ ನೀಡಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ತಿಳಿಸಿದರು.
ಗಣಕೀಕೃತದ ಮೂಲಕ ಇದೀಗ ಡ್ರೈವಿಂಗ್ ಲೈಸೆನ್ಸ್ ನೀಡಲಾಗುತ್ತಿದೆ. ಸಚಿವರಾಗಲೀ ಅಥವಾ ಸಂಸದರಾಗಲೀ ಎಲ್ಲರೂ ಆನ್ ಲೈನ್ ಪರೀಕ್ಷೆಯಲ್ಲಿ ಪಾಸಾದ ನಂತರವೇ ಲೈಸೆನ್ಸ್ ನೀಡಲಾಗುವುದು, ವಾಹನ ನೋಂದಣಿ ಹಕ್ಕು ರಾಜ್ಯಗಳಿಗೆ ಸೇರಿದ್ದು, ಕೇಂದ್ರ ಸರ್ಕಾರಕ್ಕೆ ಒಂದು ರೂಪಾಯಿ ಕೂಡಾ ಲಾಭ ಇಲ್ಲ. ಎಲೆಕ್ಟ್ರಿಕ್ ಬಸ್ ಗಳ ಬಳಕೆಯನ್ನು ಪ್ರೋತ್ಸಾಹಿಸಬೇಕಾಗಿದೆ ಎಂದರು.
ಪ್ರಸ್ತಾವಿತ ಸಂಚಾರ ನಿಯಮಗಳ ಉಲ್ಲಂಘನೆ ಹಾಗೂ ವಿಧಿಸಲಾಗುವ ದಂಡಗಳು:
ತುರ್ತು ವಾಹನಗಳಿಗೆ ದಾರಿ ಬಿಡದಿದ್ದರೆ 10 ಸಾವಿರ ರೂಪಾಯಿ
ಚಾಲನಾ ಪರವಾನಗಿ ಉಲ್ಲಂಘನೆಗೆ 1 ಲಕ್ಷ ರೂ.
ಅತಿ ವೇಗದ ಚಾಲನೆ 1 ಸಾವಿರದಿಂದ 2 ಸಾವಿರ ರೂ.
ವಿಮೆ ಇಲ್ಲದ ಡ್ರೈವಿಂಗ್ 2 ಸಾವಿರ ರೂ.
ಹೆಲ್ಮೆಟ್ ಧರಿಸದೆ ಡ್ರೈವಿಂಗ್ 1 ಸಾವಿರ ದಂಡದ ಜೊತೆಗೆ 3 ತಿಂಗಳು ಲೈಸೆನ್ಸ್ ಅಮಾನತು
ಬಾಲಪರಾಧಿಗಳು ಮಾಡುವ ರಸ್ತೆ ಅಪರಾಧ ಪ್ರಕರಣ 25 ಸಾವಿರ ರೂಪಾಯಿ
ಸಂಚಾರಿ ನಿಯಮ ಉಲ್ಲಂಘನೆ 500 ರೂ. ದಂಡ
ಆದೇಶ ಉಲ್ಲಂಘನೆಗೆ ಕನಿಷ್ಠ 2 ಸಾವಿರ ರೂ.
ಲೈಸೆನ್ಸ್ ಇಲ್ಲದೆ ಅನಧಿಕೃತ ವಾಹನ ಚಾಲನೆ 5 ಸಾವಿರ ರೂಪಾಯಿ
ಅಪಾಯಕಾರಿಯಾಗಿ ಚಾಲನೆ 1 ಸಾವಿರದಿಂದ 5 ಸಾವಿರಕ್ಕೆ ಹೆಚ್ಚಳ
ಕುಡಿದು ವಾಹನ ಚಾಲನೆ 10 ಸಾವಿರ ರೂಪಾಯಿ