ಪೆರ್ಲ: ಕವಿ ಜನಸಾಮಾನ್ಯರ ಜೊಗೆಗಿದ್ದು ಮಾರ್ಗದರ್ಶಕನಾಗಿರುತ್ತಾನೆ. ಸಮಾಜದ ಏಳು-ಬೀಳುಗಳ ರಚನಾತ್ಮಕ ವಿಮರ್ಶಕನಾಗಿ ತನ್ನ ಬರಹದ ಮೂಲಕ ಮುನ್ನಡೆಸುವ ಕವಿತ್ವ ಆಧುನಿಕ ವಿಜ್ಞಾನದೊಂದಿಗೆ ಹೊಸ ರೂಪದಲ್ಲಿ ಇನ್ನಷ್ಟು ಬಲಯುತವಾಗಬೇಕು ಎಂದು ಹಿರಿಯ ವೈದ್ಯ ಡಾ.ಜಯಗೋವಿಂದ ಉಕ್ಕಿನಡ್ಕ ಅವರು ತಿಳಿಸಿದರು.
ಪೆರ್ಲ ಸಾಹಿತ್ಯ, ಸಾಂಸ್ಕøಇಕ, ಸಾಮಾಜಿಕ ಸಂಸ್ಥೆಯಾದ ಸವಿ ಹೃದಯದ ಕವಿ ಮಿತ್ರರು ವೇದಿಕೆಯ ನೇತೃತ್ವದಲ್ಲಿ ಪೆರ್ಲ ಇಡಿಯಡ್ಕದ ಶ್ರೀದುರ್ಗಾಪರಮೇಶ್ವರಿ, ಉಳ್ಳಾಲ್ತಿ ಹಾಗೂ ಶ್ರೀವಿಷ್ಣುಮೂರ್ತಿ ದೇವಾಲಯದ ಸಭಾ ಭವನದಲ್ಲಿ ಭಾನುವಾರ ಆಯೋಜಿಸಲಾದ ಕರ್ಕಟಕ ಮಾಸ ಪ್ರಯುಕ್ತವಾದ "ಅಕ್ಷರದ ಆಟಿ ಅಟ್ಟಣೆ" ವಿಶೇಷ ಸಾಹಿತ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಋಣಾತ್ಮಕತೆಯಿಂದ ಧನಾತ್ಮಕ ಸಮಾಜವನ್ನು ಮುನ್ನಡೆಸುವ ಶಕ್ತಿ ಮತ್ತು ಹೊಣೆ ಸಾಹಿತ್ಯಕ್ಕಿದೆ. ಚಿಂತನಶೀಲ ಬರಹಗಳ ಮೂಲಕ ಸತ್ವಯುತ ಬರಹಗಳು ಕ್ರಿಯಾತ್ಮಕತೆಯನ್ನು ಬೆಳೆಸುತ್ತದೆ ಎಂದು ಅವರು ತಿಳಿಸಿದರು. ವರ್ತಮಾನದಲ್ಲಿ ವಿಜ್ಞಾನ ಬೆಳೆದ ಎತ್ತರಕ್ಕೆ ಅದಕ್ಕೆ ಸಂವಾದಿಯಾಗಿ ಸಾಹಿತ್ಯವೂ ಹೊಸತನದೊಂದಿಗೆ ಸತ್ವಯುತವಾಗಿ ಬೆಳೆಯಬೇಕು ಎಂದುತಿಳಿಸಿದ ಅವರು ಪ್ರಸ್ತುತ ಜನರನ್ನು ಭೀತಿಗೊಳಿಸಿರುವ ಡೆಂಗ್ಯು ಜ್ವರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಗೊಳ್ಳುತ್ತಿರುವ ಅಪರಿಪೂರ್ಣ ಬರಹಗಳ ಬಗ್ಗೆ ಜಾಗೃತರಾಗಿರಬೇಕು ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಿಕ್ಷಕ, ಯಕ್ಷಗಾನ ಭಾಗವತ ಸತೀಶ ಪುಣಿಚಿತ್ತಾಯ ಪೆರ್ಲ ಅವರು ಮಾತನಾಡಿ, ಸಾಹಿತ್ಯ, ಕಲಾ ಪ್ರಕಾರಗಳು ವ್ಯಕ್ತಿತ್ವ, ಸಮಾಜವನ್ನು ಎತ್ತರಕ್ಕೇರಿಸಿ ಮಾನವೀಯ ಹೃದಯಗಳನ್ನು ಸೃಷ್ಟಿಸುತ್ತದೆ. ನಾಗರಿಕ ಪ್ರಜ್ಞೆ ಬೆಳೆಸುವಲ್ಲಿ ಕವಿಗಳು ಪ್ರಧಾನ ಪಾತ್ರ ವಹಿಸುತ್ತಾರೆ ಎಂದು ತಿಳಿಸಿದರು. ಭಾರತೀಯ ಧಾರ್ಮಿಕ ಪ್ರಜ್ಞೆ ಎಂದಿಗೂ ಕುತ್ಸಿತ ಮನೋಸ್ಥಿತಿಗೆ ಕಾರಣವಾಗದು. ಆದರೆ ಇಂದು ಕುಂಠಿಗೊಂಡಿರುವ ಇಂತಹ ಜ್ಞಾನ ಶಾಖೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಯುವ ಮನಸ್ಸುಗಳನ್ನು ಪ್ರೋತ್ಸಾಹಿಸಲು ರಾಮಾಯಣ ಚೌಕಟ್ಟಿನ ಸಾಹಿತ್ತಿಕ ಕಾರ್ಯಕ್ರಮ ಆಯೋಜಿಸಿರುವುದು ಸ್ತುತ್ಯರ್ಹ ಎಂದರು.
ಇಡಿಯಡ್ಕ ಶ್ರೀಕ್ಷೇತ್ರದ ಆಡಳಿತ ಸಮಿತಿ ಕಾರ್ಯದರ್ಶಿ ಸದಾನಂದ ಮಾಸ್ತರ್ ಕುದ್ವ, ವೈದ್ಯ, ಸಾಹಿತಿ ಡಾ.ಸುರೇಶ್ ನೆಗಲಗುಳಿ, ಕಾಸರಗೋಡು ಸರ್ಕಾರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಎ.ಶ್ರೀನಾಥ್ ಕಾಸರಗೋಡು, ಗಜಲ್ ಕವಯಿತ್ರಿ, ಪುಸ್ತಕ ವಿಮರ್ಶಕಿ ಚೇತನಾ ಕುಂಬಳೆ ಉಪಸ್ಥಿತರಿದ್ದು ಶುಭಹಾರೈಸಿದರು.
ಸವಿ ಹೃದಯದ ಕವಿ ಮಿತ್ರರು ವೇದಿಕೆಯ ಸದಸ್ಯೆ ಶ್ವೇತಾ ಕಜೆ ಸ್ವಾಗತಿಸಿದರು. ಪುರುಷೋತ್ತಮ ಭಟ್ ಕೆ. ಕಾರ್ಯಕ್ರಮ ನಿರೂಪಿಸಿದರು. ಕೃತಿ ಬಳಿಕ ಆಟಿ ಆಚರಣೆ-ಪರಂಪರೆ ಮತ್ತು ಮಹಾಕಾವ್ಯ ರಾಮಾಯಣ-ತೌಳವ ನಂಬಿಕೆ ಎಂಬ ವಿಷಯದಲ್ಲಿ ವಾಂತಿಚ್ಚಾಲ್ ಮಂತ್ರಮೂರ್ತಿ ಗುಳಿಗ ಸನ್ನಿಧಿಯ ಪ್ರಧಾನ ಕರ್ಮಿ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್ ಅವರು ವಿಶೇಷ ಉಪನ್ಯಾಸ ನೀಡಿದರು. ಜೊತೆಗೆ ಎಚ್.ಎಸ್.ವೆಂಕಟೇಶಮೂರ್ತಿ ಅವರ ನಾಟಕ ಕೃತಿ ಮಂಥರೆಯ ಬಗ್ಗೆ ಶಿಕ್ಷಕಿ, ಸಂಶೋಧಕಿ ಸೌಮ್ಯಾಪ್ರಸಾದ್ ಕಿಳಿಂಗಾರು ಅವರು ವಿಮರ್ಶೆ ನಡೆಸಿದರು. ಸಾಹಿತಿ ಹರೀಶ್ ಪೆರ್ಲ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಪರಾಹ್ನ ಮಹಾಕಾವ್ಯ ರಾಮಾಯಣ ಆಧಾರಿತ ಕಥೆ, ಕವಿತೆಗಳ ಗೋಷ್ಠಿ ವಿದುಷಿಃ ಅನುಪಮಾ ರಾಘವೇಂದ್ರ ಉಡುಪಮೂಲೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಾಹಿತಿ ಎನ್.ಸುಬ್ರಾಯ ಭಟ್ ಮಂಗಳೂರು ಚಾಲನೆ ನೀಡಿದರು. ಕವಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಉಪಸ್ಥಿತರಿದ್ದರು. ಆನಂದ ರೈ ಅಡ್ಕಸ್ಥಳ ನಿರೂಪಿಸಿದರು. ಸುಭಾಷ್ ಪೆರ್ಲ ಸಹಕರಿಸಿದರು. ರಿತೇಶ್ ಕಿರಣ್ ಕಾಟುಕುಕ್ಕೆ ವಂದಿಸಿದರು.