ಕಾಸರಗೋಡು: ಆಷಾಡ ಮಾಸದ ಔಷಧ ಗಂಜಿ ಮೇಳ ಮತ್ತು ಆಷಾಡ ಫೆಸ್ಟ್ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಆರಂಭಗೊಂಡಿದೆ.
ಕುಟುಂಬಶ್ರೀ ಜಿಲ್ಲಾ ಸಮಿತಿ ವತಿಯಿಂದ 7 ದಿನಗಳ ಕಾಲ ನಡೆಯುವ ಮೇಳದಲ್ಲಿ ಔಷಧೀಯ ಗುಣಗಳನ್ನು ಹೊಂದಿರುವ 8 ವಿಧದ ಗಂಜಿಗಳ ವಿತರಣೆ, ಕುಟುಂಬಶ್ರೀ ಘಟಕಗಳ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟವೂ ನಡೆಯುತ್ತಿದೆ. ಔಷಧ ಗಂಜಿ, ಹಾಲು ಗಂಜಿ, ಜೀರಿಗೆ ಗಂಜಿ ಸಹಿತ ಗಂಜಿಗಳು ಸಾರ್ವಜನಿಕರನ್ನು ಸೆಳೆಯುತ್ತಿವೆ. ಜೊತೆಗೆ ನೆಲ್ಲಿಕಾಯಿ ಚಟ್ನಿ, ಸೊಪ್ಪಿನ ಪಲ್ಯ ಆಕರ್ಷಣೆ ಹೆಚ್ಚಿಸುತ್ತಿವೆ. ಜೊತೆಗೆ ಎಲೆಕಡುಬು ಸಹಿತ ಕಡುಬುಗಳು ಗಮನ ಸೆಳೆಯುತ್ತಿವೆ. ಉತ್ಪನ್ನಗಳ ಮಾರಾಟದಲ್ಲಿ ಆಷಾಡ ಮಾಸದ ಗಂಜಿಕಿಟ್, ಸಫಲಂ ಯೂನಿಟ್ ನ ಗೇರುಬೀಜ ಉಪನ್ನಗಳು ಇತ್ಯಾದಿಗಳು ನೋಟಕರನ್ನು ಸೆಳೆಯುತ್ತಿವೆ. ಸೋಮವಾರ ವಿವಿಧ ಇಲಾಖೆಗಳ ಸಿಬ್ಬಂದಿ, ಸಾರ್ವಜನಿಕರ ಸಹಿತ ನೂರಾರು ಮಂದಿ ವೈವಿಧ್ಯಮಯ ರುಚಿಕರ ಗಂಜಿ ಸೇವಿಸಿದರು.
ಈ ಸಂಬಂಧ ನಡೆದ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಮೇಳವನ್ನು ಉದ್ಘಾಟಿಸಿದರು. ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಚಾಲಕ ಟಿ.ಟಿ.ಸುರೇಂದ್ರನ್, ಸಹಾಯಕ ಜಿಲ್ಲಾ ಸಂಚಾಲಕ ಪ್ರಕಾಶನ್ ಪಾಲಾಯಿ, ಜಿಲ್ಲಾ ವಾರ್ತಾ ಅಧಿಕಾರಿ ಮಧುಸೂದನನ್ ಎಂ., ವಿವಿಧ ಇಲಾಖೆಗಳ ಸಿಬ್ಬಂದಿ ಉಪಸ್ಥಿತರಿದ್ದರು.