ನವದೆಹಲಿ: ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಪ್ರಮಾಣದಲ್ಲಿ ಅರೆಸೇನಾಪಡೆಗಳನ್ನು ನಿಯೋಜಿಸುತ್ತಿರುವುದು ಕಾಶ್ಮೀರಿಗಳ ಆತಂಕಕ್ಕೆ ಕಾರಣವಾಗಿದ್ದು, ಕಣಿವೆ ರಾಜ್ಯದಲ್ಲಿ ಯಾವುದೇ ದುಸ್ಸಾಹಸಕ್ಕೆ ಕೈ ಹಾಕಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಪ್ರತಿಪಕ್ಷ ಕಾಂಗ್ರೆಸ್ ಶನಿವಾರ ಎಚ್ಚರಿಕೆ ನೀಡಿದೆ.
ನಿನ್ನೆ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಪಿ ಚಿದಂಬರಂ ಅವರು, ಕೇಂದ್ರ ಸರ್ಕಾರ ಏನು ಮಾಡುತ್ತಿದೆ ಎಂಬುದನ್ನು ಕಾದು ನೋಡೋಣ. ಆದರೆ ಕಾಶ್ಮೀರದ ವಿಷಯದಲ್ಲಿ ಕೇಂದ್ರ ಸರ್ಕಾರ ದುಸ್ಸಾಹಸಕ್ಕೆ ಕೈ ಹಾಕಲು ಯೋಚಿಸಿದೆ ಎಂಬುದು ಸ್ಪಷ್ಟವಾಗುತ್ತಿದೆ ಎಂದರು. ಅಲ್ಲದೆ ಕಾಶ್ಮೀರದಲ್ಲಿ ಯಾವುದೇ ದುಸ್ಸಾಹಸಕ್ಕೆ ಕೈ ಹಾಕಬೇಡಿ ಎಂದು ನಾನು ಎಚ್ಚರಿಸುತ್ತಿದ್ದೇನೆ ಎಂದರು.
ಕಾಶ್ಮೀರ ವಿಷಯವಾಗಿ ಹಲವು ಸಂವಿಧಾನದ ವಿಚಾರಗಳು ಸುಪ್ರೀಂಕೋರ್ಟ್?ನಲ್ಲಿ ಬಾಕಿ ಇವೆ. ನನಗೆ ಇದು ಸ್ಪಷ್ಟವಾಗಿದೆ. ಕಾಶ್ಮೀರದ ವಿಷಯದಲ್ಲಿ ಅವರು ದುಸ್ಸಾಹಕ್ಕೆ ಮುಂದಾಗಲು ಯೋಜಿಸಿದ್ದಾರೆ. ಈ ವಿಚಾರವಾಗಿ ನಾನು ಅವರಿಗೆ ಎಚ್ಚರಿಕೆ ನೀಡುತ್ತಿದ್ದೇನೆ ಎಂದು ಚಿದಂಬರಂ ಹೇಳಿದ್ದಾರೆ.
ಈ ವೇಳೆ ಮಾತನಾಡಿದ ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್? ಅವರು, ಗೃಹ ಸಚಿವಾಲಯದ ಆದೇಶ ಕಾಶ್ಮೀರ ಜನತೆಯನ್ನು ಭಯಭೀತಗೊಳಿಸಿದೆ. ಇಲ್ಲಿಂದ ಹೊರಡಿ ಎಂದು ಪ್ರವಾಸಿಗರು ಮತ್ತು ಯಾತ್ರಾರ್ಥಿಗಳಿಗೆ ಹೇಳಿದ ಉದಾಹರಣೆಯೇ ಇರಲಿಲ್ಲ. ಕೇಂದ್ರ ಸರ್ಕಾರ ದ್ವೇಷದ ವಾತಾವರಣ ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಹೊರಗಿನವರಿಗೆ ಕಾಶ್ಮೀರ ಅಸುರಕ್ಷಿತ ಸ್ಥಳ ಎಂದು ಹೇಳುತ್ತಿದೆ. ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ವಿಷಾದ ಸೂಚಿಸುತ್ತೇವೆ ಎಂದರು.
ಉಗ್ರ ದಾಳಿಯ ಬೆದರಿಕೆ ಇರುವುದರಿಂದ ಪ್ರವಾಸ ಮೊಟಕುಗೊಳಿಸಿ ತಕ್ಷಣ ಕಾಶ್ಮೀರ ತೊರೆಯುವಂತೆ ಕೇಂದ್ರ ಸರ್ಕಾರ ನಿನ್ನೆ ಆದೇಶ ಹೊರಡಿಸಿದ್ದು, ಕಣಿವೆಯಿಂದ ಹೋಗಲು ವಿದೇಶಿಗರು ಸೇರಿದಂತೆ ಸಾವಿರಾರು ಪ್ರವಾಸಿಗರು ಇಂದು ಬೆಳಗ್ಗೆ ಶ್ರೀನಗರ ವಿಮಾನನಿಲ್ದಾಣದಲ್ಲಿ ದಾಂಗುಡಿ ಇಟ್ಟರು. ಪ್ರವಾಸಿಗರು ಮತ್ತು ಯಾತ್ರಾರ್ಥಿಗಳನ್ನು ಹಲವು ವಾಹನಗಳಿಂದ ಕಣಿವೆ ರಾಜ್ಯದಿಂದ ಹೊರ ಸಾಗಿಸಲಾಗುತ್ತಿದೆ.