ಶ್ರೀನಗರ: ಸಂವಿಧಾನ ವಿಧಿ 370 ರದ್ದುಗೊಂಡ ನಂತರ ಜಮ್ಮು ಮತ್ತು ಕಾಶ್ಮೀರದ ವಾಸ್ತವ ಪರಿಸ್ಥಿತಿಯನ್ನು ಖುದ್ದು ಪರಿಶೀಲಿಸಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.
ಕೇಂದ್ರದ ನಿರ್ಧಾರವನ್ನು ಸ್ಥಳೀಯರು ಸ್ವಾಗತಿಸುತ್ತಿದ್ದಾರೆ. ರಾಜ್ಯದಲ್ಲಿ ಪರಿಸ್ಥಿತಿ ತೃಪ್ತಿಕರವಾಗಿದೆ ಎಂದು ಗೃಹ ಸಚಿವಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ಅಜಿತ್ ದೋವಲ್ ವಿವರಿಸಿದ್ದಾರೆ. 370 ನೇ ವಿಧಿ ರದ್ಧತಿ, ಜಮ್ಮು ಮತ್ತು ಕಾಶ್ಮೀರ ಪುನರ್ ವಿಂಗಡಣೆ ಮಾಡಿರುವ ಹಿನ್ನೆಲೆಯಲ್ಲಿ, ಅಧಿಕಾರ ಮತ್ತು ಹೊಣೆಗಾರಿಕೆಗಳ ವರ್ಗಾವಣೆ ಸುಗಮವಾಗಿ ನಡೆಯಲು ಸೂಕ್ತ ತಂತ್ರಗಳೊಂದಿಗೆ ಅಜಿತ್ ದೋವಲ್ ಮುಂದುವರಿಯುತ್ತಿದ್ದಾರೆ. 370 ನೇ ವಿಧಿ ರದ್ದತಿಗೆ ಕಾಶ್ಮೀರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಮತ್ತು ಯಾವುದೇ ಆತಂಕಗಳಿಲ್ಲ. ಜನರು ತಮ್ಮ ಕೆಲಸ, ಕಾರ್ಯಗಳಲ್ಲಿ ನಿರತರಾಗಿದ್ದಾರೆ" ಎಂದು ಅಜಿತ್ ದೋವಲ್ ಕೇಂದ್ರಕ್ಕೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದ್ದಾರೆ.
ಮತ್ತೊಂದೆಡೆ, ಜಮ್ಮು ಮತ್ತು ಕಾಶ್ಮೀರ ರಾಜ್ಯ ಸ್ಥಾನಮಾನ ಮರಳಿ ಪಡೆಯಲಿದೆ ಎಂದು ಗೃಹ ಸಚಿವ ಅಮಿತ್ ಶಾ ಅವರು ಮಾಡಿದ ಘೋಷಣೆಯನ್ನು ರಾಜ್ಯದ ಜನರು ಸ್ವಾಗತಿಸಿದ್ದಾರೆ. ಎಂದೆಂದಿಗೂ ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗಿರಬೇಕು ಎಂಬುದು ತಮ್ಮ ಅಭಿಮತವಲ್ಲ ಎಂಬ ಗೃಹಸಚಿವರ ಹೇಳಿಕೆಯನ್ನು ಸ್ಥಳೀಯರು ಸ್ವಾಗತಿಸಿದ್ದಾರೆ ಎಂದು ದೋವಲ್ ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.