ನವದೆಹಲಿ: ಬೇಹುಗಾರಿಕೆ ಮತ್ತು ಭಯೋತ್ಪಾದನೆಯ ಆರೋಪದಲ್ಲಿ ಕಳೆದ 3 ವರ್ಷಗಳಿಂದ ಪಾಕಿಸ್ತಾನದ ಸೆರೆಯಲ್ಲಿರುವ ಭಾರತೀಯ ನೌಕಾಪಡೆಯ ನಿವೃತ್ತ ಯೋಧ ಕುಲಭೂಷಣ್ ಜಾಧವ್ ಅವರನ್ನು ಭಾರತೀಯ ದೂತಾವಾಸ ಅಧಿಕಾರಿಗಳು ಭೇಟಿಯಾಗಲು ಅವಕಾಶ ಕಲ್ಪಿಸುವುದಾಗಿ ಪಾಕಿಸ್ತಾನ ನೀಡಿರುವ ಪ್ರಸ್ತಾವವನ್ನು ಪರಿಶೀಲಿಸುತ್ತಿರುವುದಾಗಿ ಭಾರತ ಹೇಳಿದೆ.
ಇಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್, ಅಂತಾರಾಷ್ಟ್ರೀಯ ನ್ಯಾಯಾಲಯವು ನೀಡಿರುವ ಮಾರ್ಗದರ್ಶನದ ಆಧಾರದಲ್ಲಿ ಪಾಕಿಸ್ತಾನದ ಪ್ರಸ್ತಾವಕ್ಕೆ ಸಮಯಕ್ಕೆ ಸರಿಯಾಗಿ ರಾಜತಾಂತ್ರಿಕ ಮಾರ್ಗದ ಮೂಲಕ ಉತ್ತರ ನೀಡಲಾಗುವುದು ಎಂದು ಹೇಳಿದರು.
ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಪಿನ ನಂತರ ಭಾರತೀಯ ಅಧಿಕಾರಿಗಳು ಕುಲಭೂಷಣ್ ಜಾಧವ್ ಅವರನ್ನು ಭೇಟಿಯಾಗಲು ಪಾಕಿಸ್ತಾನ ನೀಡಿರುವ ಪ್ರಸ್ತಾವನೆಯನ್ನು ಭಾರತ ಸ್ವೀಕರಿಸಿದೆ. ಈ ವಿಷಯದ ಬಗ್ಗೆ ರಾಜತಾಂತ್ರಿಕ ಮಾರ್ಗದ ಮೂಲಕ ಪಾಕಿಸ್ತಾನದ ಜೊತೆ ಸಂಪರ್ಕ ಹೊಂದಲಾಗಿದೆ ಎಂದರು.
ಪಾಕಿಸ್ತಾನದಲ್ಲಿರುವ ಭಾರತೀಯ ರಾಯಭಾರಿಗೆ ಕುಲಭೂಷಣ್ ಜಾಧವ್ ಭೇಟಿಗೆ ಅವಕಾಶ ನೀಡಬೇಕು ಎಂದು ಜುಲೈ 17ರಂದು ಅಂತಾರಾಷ್ಟ್ರೀಯ ನ್ಯಾಯಾಲಯ ತೀರ್ಪು ನೀಡಿದೆ. ಮರಣದಂಡನೆ ತೀರ್ಪು ರದ್ದುಗೊಳಿಸಿದ್ದು, ಪ್ರಕರಣದ ಸಂಪೂರ್ಣ ಮರುವಿಚಾರಣೆ ನಡೆಸಬೇಕೆಂದು ಪಾಕಿಸ್ತಾನಕ್ಕೆ ಸೂಚಿಸಿದೆ.
ಕುಲಭೂಷಣ್ ಬಿಡುಗಡೆ ಹೊರತುಪಡಿಸಿ ಉಳಿದೆಲ್ಲ ಅಂಶಗಳು ಭಾರತದ ಪರವಾಗಿದ್ದು, ಪ್ರಮುಖವಾಗಿ ಪಾಕಿಸ್ತಾನ ವಿಯೆನ್ನಾ ಅಂತಾರಾಷ್ಟ್ರೀಯ ಒಪ್ಪಂದವನ್ನು ಉಲ್ಲಂಘಿಸಿದೆ ಎಂಬ ಅಂತಾರಾಷ್ಟ್ರೀಯ ನ್ಯಾಯಾಲಯ ನೀಡಿರುವತೀರ್ಪು ಭಾರತದ ಪಾಲಿಗೆ ಬಹುದೊಡ್ಡ ಗೆಲುವಾಗಿದೆ.
ಈ ತೀರ್ಪಿನ ಬಳಿಕ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿ, ಸತ್ಯ ಮತ್ತು ನ್ಯಾಯ ಯಾವಾಗಲೂ ಮೇಲುಗೈ ಸಾಧಿಸುತ್ತದೆ. ಕುಲಭೂಷಣ್ ಜಾಧವ್ ಅವರಿಗೆ ನ್ಯಾಯ ಸಿಗುತ್ತದೆ ಎಂಬ ನಂಬಿಕೆಯಿದೆ* ಎಂದು ಟ್ವೀಟ್ ಮಾಡಿದ್ದರು, ಭಾರತೀಯ ನೌಕಾಪಡೆಯ ನಿವೃತ್ತ ಸೇನಾಧಿಕಾರಿ, 49 ವರ್ಷ ವಯಸ್ಸಿನ ಕುಲಭೂಷಣ್ ಜಾಧವ್, ಇರಾನ್ ನ ಚಾಬಹಾರ್ ನಲ್ಲಿ ವ್ಯಾಪಾರ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದ ವೇಳೆ ಪಾಕಿಸ್ತಾನಿ ಏಜೆಂಟರಿಂದ ಬಂಧಿತರಾಗಿದ್ದರು. ಗೂಢಚಾರಿಕೆ ಮತ್ತು ಭಯೋತ್ಪಾದನೆಯ ಆರೋಪಗಳನ್ನು ಒಪ್ಪಿಕೊಳ್ಳುವಂತೆ ಬಲವಂತಪಡಿಸಿದೆ ಎಂದು ಭಾರತ ಸಮರ್ಥಿಸಿಕೊಂಡಿದೆ.