ಶ್ರೀನಗರ: ಕಣಿವೆರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಒಂದೇ ವಾರದ ಅವಧಿಯಲ್ಲಿ ಅಪಾರ ಪ್ರಮಾಣದ ಸೈನಿಕರ ಜಮಾವಣೆ ಮಾಡಿರುವ ಹಿನ್ನಲೆಯಲ್ಲಿ ಅಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಈ ಕುರಿತಂತೆ ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಅವರು ಜನತೆ ಭಯ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ವಾರದ ಹಿಂದಷ್ಟೇ ಕಾಶ್ಮೀರಕ್ಕೆ 10 ಸಾವಿರ ಸೈನಿಕರ ನಿಯೋಜಿಸಿದ್ದ ಕೇಂದ್ರ ಸರ್ಕಾರ ಮತ್ತೆ 28 ಸಾವಿರ ಸೈನಿಕರ ನಿಯೋಜನೆ ಮಾಡಿತ್ತು. ವಾರಗಳ ಹಿಂದೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ 2 ದಿನಗಳ ಕಾಶ್ಮೀರ ಭೇಟಿಯಲ್ಲಿದ್ದರು. ದೋವಲ್ ಹಿಂದಿರುಗಿದ ಬಳಿಕ ಈ ಬೆಳವಣಿಗೆಗಳು ನಡೆದಿದ್ದು, ಭಯೋತ್ಪಾದಕರ ದಾಳಿ ಅಥವಾ ಭಾರತ ಪಾಕ್ ಯುದ್ಧದ ಕುರಿತು ಇಲ್ಲಿನ ಜನತೆ ಆತಂಕಕ್ಕೀಡಾಗಿದ್ದರು.
ಇದೇ ವಿಚಾರ ಸಂಸತ್ ನಲ್ಲೂ ಪ್ರತಿಧ್ವನಿಸಿತ್ತು. ಇದಕ್ಕೆ ಸ್ಪಷ್ಟನೆ ನೀಡಿದ್ದ ಕೇಂದ್ರ ಗೃಹ ಇಲಾಖೆ ಕೂಡ ಇದೊಂದು ಸಾಮಾನ್ಯ ಪ್ರಕ್ರಿಯೆ ಯೋಧರ ಸ್ಥಳಾಂತರ ಮತ್ತು ನಿಯೋಜನೆಯ ಹಿಂದೆ ಯಾವುದೇ ಆತಂಕಕಾರಿ ಬೆಳವಣಿಗೆ ಇಲ್ಲ ಎಂದು ಹೇಳಿತ್ತು.
ಇದೀಗ ಇದೇ ವಿಚಾರವಾಗಿ ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಅವರೂ ಕೂಡ ಪ್ರತಿಕ್ರಿಯೆ ನೀಡಿದ್ದು, ರಾಜ್ಯದಲ್ಲಿ ಸೈನಿಕರ ಜಮಾವಣೆ ಮತ್ತು ಸ್ಥಳಾಂತರ ಸಾಮಾನ್ಯ ಪ್ರಕ್ರಿಯೆಯಷ್ಚೇ.. ಈ ಕುರಿತಂತೆ ಜನರಲ್ಲಿ ಅನಗತ್ಯ ಭಯ ಬಿತ್ತಲಾಗುತ್ತಿದೆ. ಆದರೆ ಜನತೆ ಊಹಾಪೋಹಗಳಿಗೆ ಕಿವಿಗೊಡಬೇಡಿ. ಶಾಂತಿ ಸುವ್ಯವಸ್ಥೆ ನಮ್ಮ ನಿಮ್ಮೆಲ್ಲರ ಹೊಣೆ ಎಂದು ಕರೆ ನೀಡಿದ್ದಾರೆ. ಅಲ್ಲದೆ ಈ ಕುರಿತಂತೆ ಹೇಳಿಕೆ ಕೂಡ ಬಿಡುಗಡೆ ಮಾಡಿದ್ದಾರೆ.
ಇದೇ ವಿಚಾರವಾಗಿ ಮಾತನಾಡಿರುವ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾ ನಿರ್ದೇಶಕರು, ಉತ್ತರ ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಸಂಖ್ಯೆ ತೀರಾ ಕಡಿಮೆ ಇದ್ದು, ಹೆಚ್ಚಿನ ಸಿಬ್ಬಂದಿಗಳ ಅಗತ್ಯವಿದೆ ಎಂದು ಹೇಳಿದ್ದಾರೆ. ಇನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರೂ ಕೂಡ ಭೇಟಿ ನೀಡಲಿದ್ದು, ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.