ನವದೆಹಲಿ: ನನಗೆ ಗೃಹ ಬಂಧನ ವಿಧಿಸಲಾಗಿದೆ. ಆದರೆ ನನ್ನನ್ನು ಗೃಹ ಬಂಧನದಲ್ಲಿ ಇರಿಸಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂಸತ್ತಿಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಫಾರೂಖ್ ಅಬ್ದುಲ್ಲಾ ಅವರು ಮಂಗಳವಾರ ಹೇಳಿದ್ದಾರೆ.
ನನ್ನ ರಾಜ್ಯ ಹೊತ್ತಿ ಉರಿಯುತ್ತಿರುಬೇಕಾದರೆ ನಾನು ಏಕೆ ಸ್ವ ಇಚ್ಛೆಯಿಂದ ಮನೆಯಲ್ಲಿಯೇ ಇರಲಿ. ನನ್ನ ಜನರನ್ನು ಮತ್ತು ನನ್ನ ಮಗನನ್ನು ಜೈಲಿಗೆ ಹಾಕಲಾಗಿದೆ. ಇಂತಹ ಸಂದರ್ಭದಲ್ಲಿ ನಾನು ಮನೆಯಲ್ಲಿ ಮುಕ್ತವಾಗಿರಲು ಹೇಗೆ ಸಾಧ್ಯ? ಅಮಿತ್ ಶಾ ಸಂಸತ್ತಿಗೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ನಾನು ನಂಬಿದ ಭಾರತ ಇದಲ್ಲ ಎಂದು ಫಾರೂಖ್ ಅಬ್ದುಲ್ಲಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನನ್ನ ಮನೆಯ ಬಾಗಿಲು ತೆರೆದ ತಕ್ಷಣ ನಾನು ಮತ್ತು ನನ್ನ ಬೆಂಬಲಿಗರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ ಮತ್ತು ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲೇರುತ್ತೇವೆ. ನಾವು ಗುಂಡಿನ ದಾಳಿ ಮತ್ತು ಗ್ರೆನೇಡ್ ದಾಳಿಕೋರರಲ್ಲ. ಕಲ್ಲು ತೂರಾಟಗಾರರಲ್ಲ. ಶಾಂತಿಯುತ ಪರಿಹಾರದಲ್ಲಿ ನಂಬಿಕೆ ಇರುವವರು. ಆದರೆ ಕೇಂದ್ರ ಸರ್ಕಾರ ನಮ್ಮ ಹತ್ಯೆ ಮಾಡಲು ಬಯಸಿದೆ. ನನ್ನ ಮಗ ಜೈಲಿನಲ್ಲಿದ್ದಾನೆ ಎಂದು ಫಾರೂಖ್ ಅಬ್ದುಲ್ಲಾ ಹೇಳಿದ್ದಾರೆ.
ತಮ್ಮನ್ನು ಹಾಗೂ ರಾಜ್ಯದ ಜನರನ್ನು ಮಾಧ್ಯಮಗಳೇ ರಕ್ಷಿಸಬೇಕೆಂದು ಭಾವೋದ್ವೇಗದಿಂದ ಮನವಿ ಮಾಡಿದ ಮಾಜಿ ಸಿಎಂ, ಕೇಂದ್ರ ಸರ್ಕಾರದ ನಾಯಕರು ರಾಜ್ಯವನ್ನು ವಿಭಜಿಸಿದರು. ಆದರೆ, ಹೃದಯವನ್ನೂ ವಿಭಜಿಸಲು ಅವರಿಂದ ಸಾಧ್ಯವೇ? ಹಿಂದೂ ಮತ್ತು ಮುಸ್ಲಿಂ ಎಂದು ಜನರನ್ನು ವಿಭಜಿಸಬಹುದೇ? ಎಂದು ಆಕ್ರೋಶದಿಂದ ಪ್ರಶ್ನಿಸಿದರು.
ಈ ದೇಶ ಜಾತ್ಯತೀತತೆ ಹಾಗೂ ಏಕತೆಯ ಮೇಲೆ ವಿಶ್ವಾಸ, ನಂಬಿಕೆ ಇರಿಸಿದೆ ಎಂದು ಭಾವಿಸಿದ್ದೆ. ಆದರೆ ಇಂದು ಬಿಜೆಪಿ ಪ್ರಜಾತಂತ್ರದ ವಿರುದ್ಧವಾಗಿ ಜಮ್ಮು ಕಾಶ್ಮೀರವನ್ನು ವಿಭಜಿಸಿದೆ ಎಂದು ವಾಗ್ದಾಳಿ ನಡೆಸಿದರು.
ಇಂದು ಲೋಕಸಭೆಯಲ್ಲಿ ಜಮ್ಮು- ಕಾಶ್ಮೀರ ಪುನರ್ ರಚನೆ ಮಸೂದೆ 2019ರ ಮೇಲಿನ ಚರ್ಚೆಯ ಸಂದರ್ಭದಲ್ಲಿ ಫಾರೂಖ್ ಅಬ್ದುಲ್ಲಾ ಏಲ್ಲಿ, ಅವರನ್ನು ದೇಶ ನೋಡಬಯಸುತ್ತಿದೆ ಎಂದು ಪ್ರತಿಪಕ್ಷಗಳು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದವು.
ಜಮ್ಮು- ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ಲಾ ಹಾಗೂ ಮತ್ತಿತರ ನಾಯಕರನ್ನು ಏಕೆ ಗೃಹ ಬಂಧನದಲ್ಲಿ ಇರಿಸಲಾಗಿದೆ. ಅವರ ಬಗ್ಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌದರಿ ಹೇಳಿದರು.
ಫಾರೂಖ್ ಅಬ್ದುಲ್ಲಾ ನಾಪತ್ತೆಯಾಗಿದ್ದಾರೆ. ಇದಕ್ಕೆ ಗೃಹ ಸಚಿವರೆ ಹೊಣೆ ಹೊರಬೇಕಾಗುತ್ತದೆ. ಅವರು ಏಲ್ಲಿದ್ದಾರೆ ಎಂಬುದನ್ನು ಸದನಕ್ಕೆ ತಿಳಿಸಬೇಕಾಗಿದೆ. ಅವರ ಬಗ್ಗೆ ಸದನಕ್ಕೆ ಗೊತ್ತಾಗಬೇಕಾಗಿದೆ ಎಂದು ಡಿಎಂಕೆ ಮುಖಂಡ ದಯಾನಿದಿ ಮಾರನ್ ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ ಅಮಿತ್ ಶಾ, ಫಾರೂಖ್ ಅಬ್ದುಲ್ಲಾ ಅವರಿಗೆ ಗೃಹ ಬಂಧನ ವಿಧಿಸಿಲ್ಲ ಮತ್ತು ವಶಕ್ಕೂ ಪಡೆದುಕೊಂಡಿಲ್ಲ. ಅವರ ಮನೆಯಲ್ಲಿ ಮುಕ್ತವಾಗಿ ಇದ್ದಾರೆ ಎಂದು ಹೇಳಿದ್ದರು.