ಉಪ್ಪಳ: ಶರೀರಮಾದ್ಯಂ ಎಂಬಂತೆ ಏನೇ ಸಾಧÀನೆ ಮಾಡಬೇಕಾದರೂ ನಮ್ಮ ಶರೀರ ಮೊದಲು ಬೇಕು. ನಾಲಿಗೆ ಚಪಲ, ಇಂದ್ರಿಯ ಚಪಲಗಳಿಂದಾಗಿ ಶರೀರದ ಕಡೆಗಿನ ಗಮನ ಕಡಿಮೆಯಾಗುತ್ತಿದ್ದು ಆಯುರ್ವೇದ ಶಾಸ್ತ್ರ ನಮ್ಮಿಂದ ದೂರವಾಗುತ್ತಿದೆ. ಶರೀರದ ಸಂರಕ್ಷಣೆಗಾಗಿ ಕಾಲಕ್ಕನುಗುಣವಾಗಿ ಸೇವಿಸಬೇಕಾದ ಆಹಾರ ಪದಾರ್ಥಗಳನ್ನು ಪ್ರಕೃತಿಯೇ ನಮಗೆ ನೀಡುತ್ತದೆ. ಅದನ್ನು ಉಪಯೋಗಿಸಿಕೊಂಡು ಬದುಕುವ ಬುದ್ಧಿವಂತಿಕೆಯೂ ನಮಗಿದೆಯಾದರೂ ಅತ್ತ ಗಮನ ಕೊಡದೆ ಎಲ್ಲವನ್ನೂ ವಿಕೃತಗೊಳಿಸುವಲ್ಲಿ ಜನರು ಆಸಕ್ತರಾಗಿದ್ದಾರೆ. ಹಿಂದಿನ ಆಹಾರ ಪದ್ಧತಿಯು ಔಷಧವಾಗಿತ್ತು. ಅಡುಗೆ ಮನೆಗಳು ಔಷಧಾಲಯಗಳಾಗಿದ್ದುವು. ಆದರೆ ಬೇಜವಾಬ್ಧಾರಿತನದಿಂದ ಇಂದು ಆಸ್ಪತ್ರೆಗಳೇ ನಮ್ಮ ಆಶ್ರಯ ತಾಣವಾಗಿ ಬದಲಾಗಿದೆ. ಶಾರೀರಿಕ ಸ್ವಾಸ್ತ್ಯ ಸಂರಕ್ಷಣೆಗೆ ಆದ್ಯತೆ ನೀಡದಿರುವುದರಿಂದ ನೂರಾರು ರೋಗಗಳಿಗೆ ದಾಸರಾಗಬೇಕಾಗುತ್ತದೆ ಎಂದು ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ನುಡಿದರು.
ಅವರು ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರಿನಲ್ಲಿ ಭಾನುವಾರ ಜರುಗಿದ ಆಯು ಸಂಭ್ರಮ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀವರ್ಚನ ನೀಡಿದರು.
ಆಯು ಸಂಭ್ರಮದ ಅಧ್ಯಕ್ಷತೆ ವಹಿಸಿದ್ದ ಕೇರಳ ಪ್ರಾಂತ ಸಂರಕ್ಷಣಾ ಸಮಿತಿ ಅಧ್ಯಕ್ಷ ರವೀಂದ್ರ ವೈದ್ಯರು ಮಾತನಾಡಿ ಆಯುರ್ವೇದ ಸ್ವಾಸ್ತ್ಯ ಸಮಾಜದ ಮೂಲ. ನಾವು ಪ್ರಕೃತಿಗೆ ಹತ್ತಿರಾದಂತೆ ಸುಖ,ಸಂತೋಷ, ನೆಮ್ಮದಿ ಮತ್ತು ಆರೋಗ್ಯವಂತ ಬದುಕು ನಮ್ಮದಾಗುತ್ತದೆ. ಆ ನಿಟ್ಟಿನಲ್ಲಿ ಈ ಕಾಲಘಟ್ಟದ ಜನಜೀವನವನ್ನು ಸಂರಕ್ಷಿಸುವ ಮತ್ತು ಜನಜಾಗೇರಿ ಮೂಡಿಸುವ ಕಾರ್ಯ ಸ್ವಾಮಿಗಳ ನೇತೃತ್ವದಲ್ಲಿ ನಡೆಯುತ್ತಿರುವುದು ಸಂತಸ ನೀಡಿದೆ ಎಂದು ಹೇಳಿದರು. ಊಟ ಬಲ್ಲವನಿಗೆ ರೋಗವಿಲ್ಲ ಎಂಬಂತೆ ಋತುವಿಗನುಸಾರವಾಗಿ ಹಿತಮಿತವಾದ ಆಹಾರ ಸೇವನೆಯನ್ನು ರೂಢಿಸಿಕೊಂಡಾಗ ಆರೋಗ್ಯ ಪೂರ್ಣ ಸಮಾಜ ನಿರ್ಮಾಣವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯ ಸಿ.ಕೆ.ಪದ್ಮನಾಭನ್ ಮಾತನಾಡಿ ಕೃತಕ ಆಹಾರಗಳ ಆಕರ್ಷಣೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದರಲ್ಲಿ ಎರಡು ಮಾತಿಲ್ಲ. ನಾಲಗೆಯ ರುಚಿಗಿಂತ ಆರೋಗ್ಯ ಸಂರಕ್ಷಣೆಗೆ ಪ್ರಾಧಾನ್ಯತೆ ನೀಡಬೇಕು. ಭಾರತೀಯ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳೋಣ. ನಮ್ಮ ಪ್ರಾಮುಖ್ಯತೆ ಸತ್ವಯುತ ಆಹಾರ ಮತ್ತು ಉತ್ತಮ ಆರೋಗ್ಯದ ಕಡೆಗಿರಲಿ ಎಂದು ಹೇಳಿದರು. ಪ್ರೇಮಾನಂದ ಶೆಟ್ಟಿ, ಹರಿಪ್ರಸಾದ್ ಶೆಟ್ಟಿ, ವಿಶ್ವ ಹಿಂದೂ ಪರಿಷತ್ ಸಂಘಟಕ ಪ್ರೇಮಾನಂದ ಶೆಟ್ಟಿ ಕುಂದಾಪುರ ಮುಖ್ಯ ಅತಿಥಿಗಾಳಗಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಶಶಿಧರ ಶೆಟ್ಟಿ ಮುಟ್ಟ, ಡಾ,ಸಜೀವನ್ ಪಾಲಕ್ಕಾಡ್. ಹರಿಪ್ರಸಾದ್ ಶೆಟ್ಟಿ ಉದ್ಯಮಿ ಕುಂದಾಪುರ, ಡಾ.ಶ್ರೀಧರ ಬಾಯಿರಿ ಉಡುಪಿ ಉಪಸ್ಥಿತರಿದ್ದರು.
ಕು.ಗಾಯತ್ರಿ ಪ್ರಾರ್ಥನೆ ಗೀತೆ ಹಾಡಿದರು. ಹರೀಶ್ ಮಾಡ ಸ್ವಾಗತಿಸಿ ಪುಷ್ಪರಾಜ ಐಲ ವಂದಿಸಿದರು.
ನಾಗನ ಕಟ್ಟೆಯಲ್ಲಿ ವಿಶೇಷ ನಾಗಪೂಜೆ ಜರುಗಿತು. ಅನ್ನ, ಅಕ್ಷರ, ಆಹಾರ, ಆಧಾರ ಮತ್ತು ಆರೋಗ್ಯ ಎಂಬ ಐದು ತತ್ವಗಳ ಮೂಲಕ ಜನರಿಗೆ ನೆರವಾಗುವ ರೀತಿಯಲ್ಲಿ ವಿದ್ಯಾದಾನ, ಮನೆದಾನ ಮುಂತಾದ ಚಟುವಟಿಕೆಗಳು ಆಶ್ರಮದ ಆಶ್ರಯದಲ್ಲಿ ನಡೆಯುತ್ತಿದೆ. ಧ್ಯಾನಿ, ಜ್ಞಾನಿ ಮತ್ತು ದಾನಿಗಳಿಂದ ಸಂಪನ್ನವಾದ ವೇದಿಕೆಯನ್ನು ವಿವಿಧ ಔಷಧೀಯ ಗಿಡಮೂಲಿಕೆಗಳಿಂದ ಅಲಂಕರಿಸಲಾಗಿತ್ತು.
ಆಯು ಸಂಭ್ರಮದಲ್ಲಿ ಔಷಧಿಯುಕ್ತ ಆಹಾರ ಕಾರ್ಯಾಗಾರವನ್ನು ಡಾ.ಶ್ರೀಧರ ಬೈರಿ ಉಡುಪಿ ಹಾಗೂ ಕೇರಳ ನಿತ್ಯಾನಂದ ಆಯುರ್ವೇಧ ಸಂರಕ್ಷಣಾ ಸಮಿತಿಯ ರವೀಂದ್ರ ವೈದ್ಯರು ನಡೆಸಿಕೊಟ್ಟರು. ಕಾರ್ಯಾಗಾರದಲ್ಲಿ ಬಾಳೆಎಲೆಯಲ್ಲಿ ಊಟ ಮಾಡುವುದರಿಂದ ಉಂಟಾಗುವ ಪ್ರಯೋಜನಗಳು, ತೆಂಗಿನ ಕಾಯಿಯ ಪ್ರತ್ಯೇಕತೆ ಮತ್ತು ಉಪಯೋಗಗಳು, ಭಾರತೀಯ ಆಹಾರ ಪದ್ಧತಿ ಮತ್ತು ವೈಜ್ಞಾನಿಕ ಹಿನ್ನೆಲೆ, ಮಳೆ ನೀರಿನ ಮಹತ್ವ, ತೈಲ ಅಭ್ಯಂಗ, ಸ್ನಾನ, ವ್ಯಾಯಾಮ, ತಾಯಿ ಹಾಲಿನ ಬಗ್ಗೆ ಮಾಹಿತಿ ನೀಡಲಾಯಿತು. ಡಾ.ಸಜೀವನ್ ಔಷಧೀಯ ಸಸ್ಯಗಳ ಪರಿಚಯ ಮತ್ತು ಉಪಯೋಗಗಳನ್ನು ಮಲಯಾಳಂನಲ್ಲಿ ವಿವರಿಸಿದರು. ಡಾ,ಗೋಪಿನಾಥ್ ಕನ್ನಡಲ್ಲಿ ಮಾಹಿತಿ ನೀಡಿದರು.