ಕಾಸರಗೋಡು: ಕಾಸರಗೋಡು ನಗರ ಕೇರಳದ ಅತ್ಯಂತ ಹಿಂದುಳಿದ ನಗರವಾಗಿ ಬಿಟ್ಟಿದೆ. ನಗರದ ಸ್ಥಿತಿ ತುಂಬಾ ಚಿಂತಾಜನಕವಾಗಿದೆ. ನಗರವನ್ನು ಆಳುತ್ತಿರುವ ಮುಸ್ಲಿಂ ಲೀಗ್ ಇದಕ್ಕೆ ಕಾರಣವಾಗಿದೆ. ನಗರಸಭಾ ಆಡಳಿತದಲ್ಲಿ ಯಾವುದು ಸರಿ ಇಲ್ಲ ಎಂಬುದು ಇತ್ತೀಚೆಗೆ ಕ್ಷೇಮ ಸ್ಥಾಯೀ ಸಮಿತಿ ಅಧ್ಯಕ್ಷ ರಾಜಿನಾಮೆ ನೀಡಿದ್ದು ಇದಕ್ಕೆ ಪ್ರಧಾನ ಸಾಕ್ಷಿಯಾಗಿದೆ. ಮುಂದಿನ ದಿನಗಳಲ್ಲಿ ಕಾಸರಗೋಡು ನಗರ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾದ ಪರಿಸ್ಥಿತಿಯಲ್ಲಿದೆ. ಕಾಸರಗೋಡು ನಗರವನ್ನು ಮೇಲೆತ್ತಲು ಶಕ್ತಿಮೀರಿ ಕೆಲಸ ಮಾಡಬೇಕಾಗಿದೆ ಎಂದು ಕಾಸರಗೋಡು ನಗರಸಭೆ ಬಿಜೆಪಿ ಸದಸ್ಯರ ಸಭೆಯಲ್ಲಿ ರವೀಂದ್ರ ಪೂಜಾರಿ ಅಭಿಪ್ರಾಯಪಟ್ಟರು.
ಈ ಸಮಸ್ಯೆಗಳಿಗೆಲ್ಲ ಪರಿಹಾರ ಕಂಡುಹಿಡಿಯಲು ಹಾಗೂ ನಗರವನ್ನು ಅಭಿವೃದ್ಧಿಯ ಪಥದೆಡೆಗೆ ಸಾಗಿಸುವ ಪ್ರಯತ್ನದ ಅಂಗವಾಗಿ ಕಾಸರಗೋಡು ನಗರಸಭೆಯ ಬಿಜೆಪಿ ಸದಸ್ಯರು ಸಭೆ ಸೇರಿ ಯೋಜನೆಯನ್ನು ಹಾಕಲಾಯಿತು. ನಗರಾಭಿವೃದ್ಧಿಯ ರೂಪುರೇಷೆಯನ್ನು ತಯಾರುಮಾಡಿ ಇದಕ್ಕಾಗಿ ಮುಂದಿನ ದಿನಗಳಲ್ಲಿ ಎಲ್ಲಾ ಹಂತದ ಹೋರಾಟ ನಡೆಸಲು ತೀರ್ಮಾನಿಸಲಾಯಿತು. ಮೊದಲ ಹಂತವಾಗಿ ಕಾಸರಗೋಡು ಶಾಸಕರನ್ನು ಭೇಟಿ ಮಾಡಿ ಕಾಸರಗೋಡು ನಗರ ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಮಗ್ರ ಚಿತ್ರಣವನ್ನು ನೀಡಿ ಬಿಜೆಪಿ ತಯಾರಿಸಿದ ರೂಪು ರೇಷೆಯನ್ನು ಸಮರ್ಪಿಸಲಾಗುವುದೆಂದು ಇದೇ ವೇಳೆ ರವೀಂದ್ರ ಪೂಜಾರಿ ಹೇಳಿದರು.