ನವದೆಹಲಿ: ಪ್ರಸಿದ್ಧ ಪುಣ್ಯ ಕ್ಷೇತ್ರ ಕೈಲಾಸ ಮಾನಸ ಸರೋವರಕ್ಕೆ ಯಾತ್ರೆ ಕೈಗೊಳ್ಳುವ ಭಾರತದ ಯಾತ್ರಾರ್ಥಿಗಳಿಗೆ ಚೀನಾ ವೀಸಾ ನೀಡಿದೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.
ಲಡಾಖ್ ಪ್ರದೇಶವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಕೇಂದ್ರಸರ್ಕಾರ ಘೋಷಿಸಿದ ನಂತರ ಭಾರತೀಯ ಯಾತ್ರಾರ್ಥಿಗಳಿಗೆ ವೀಸಾ ನೀಡಲು ಚೀನಾ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ ಎಂಬಂತಹ ಮಾತುಗಳು ಕೇಳಿಬಂದಿದ್ದವು.
ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಳ್ಳುವ ಭಾರತೀಯ ಯಾತ್ರಾರ್ಥಿಗಳಿಗೆ ವೀಸಾ ನೀಡುವಲ್ಲಿ ಚೀನಾ ಸರ್ಕಾರ ಯಾವುದೇ ರೀತಿಯ ತೊಂದರೆ ನೀಡಿಲ್ಲ ಎಂದು ಚೀನಾ ರಾಯಬಾರಿ ಅಧಿಕಾರಿಗಳು ಹೇಳಿದ್ದಾರೆ.
ಹಿಂದೂಗಳ ಪವಿತ್ರ ತಾಣವಾಗಿರುವ ಕೈಲಾಸ ಮಾನಸ ಸರೋವಾರ ಚೀನಾ ಆಳ್ವಿಕೆ ಒಳಪಟ್ಟಿರುವ ಟಿಬೆಟಿಯನ್ ಪ್ರಾಂತ್ಯದಲ್ಲಿದೆ. ಪ್ರತಿವರ್ಷ ನೂರಾರು ಭಾರತೀಯ ಯಾತ್ರಾರ್ಥಿಗಳು ಟ್ರೆಕ್ಕಿಂಗ್ ನೊಂದಿಗೆ ಇಲ್ಲಿಗೆ ಭೇಟಿ ನೀಡುತ್ತಾರೆ.
ಲಡಾಖ್ ಪ್ರದೇಶವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿದ ಭಾರತದ ಸರ್ಕಾರದ ಕ್ರಮಕ್ಕೆ ಮಂಗಳವಾರ ಆಕ್ಷೇಪ ವ್ಯಕ್ತಪಡಿಸಿದ ಚೀನಾ, ಕಾಶ್ಮೀರದಲ್ಲಿನ ಪ್ರಸ್ತುತದಲ್ಲಿನ ಪರಿಸ್ಥಿತಿ ಗಂಭೀರವಾಗಿದೆ ಎಂದು ಹೇಳಿಕೆ ನೀಡಿತ್ತು. ಚೀನಾ ಆಕ್ಷೇಪವನ್ನು ತಳ್ಳಿಹಾಕಿದ ಭಾರತ, ಇದು ನಮ್ಮ ಆಂತರಿಕ ವಿಚಾರವಾಗಿದೆ ಎಂದು ಪ್ರತಿಕ್ರಿಯಿಸಿತ್ತು.