ಬದಿಯಡ್ಕ: ಜನಿಸಿದ ಶಿಶುವಿನ ಸಮಗ್ರ ಬೆಳವಣಿಗೆಗೆ ತಾಯಿಯ ಎದೆಹಾಲು ಪ್ರಧಾನವಾಗಿದೆ. 2ರಿಂದ ಮೂರು ವರ್ಷದ ತನಕ ತಾಯಿಯು ಮಗುವಿಗೆ ಸ್ತನ್ಯಪಾನ ಮಾಡುವುದರಿಂದ ಆ ಮಗು ಆರೋಗ್ಯವಂತವಾಗಿರುತ್ತದೆ. ತಾಯಿಯ ಎದೆಹಾಲಿಗೆ ಪರ್ಯಾಯವೆಂಬುದಿಲ್ಲ. ಎದೆಹಾಲನ್ನು ನೀಡುವ ಮೂಲಕ ಮಕ್ಕಳ ಆರೋಗ್ಯಪೂರ್ಣವಾದ ಬದುಕಿಗೆ ತಾಯಿಯು ಕಾರಣವಾಗಬೇಕು ಎಂದು ಬದಿಯಡ್ಕ ಗ್ರಾಮಪಂಚಾಯಿತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಹೇಳಿದರು.
ಬುಧವಾರ ಬದಿಯಡ್ಕ ಗ್ರಾಮಪಂಚಾಯಿತಿ, ಐಸಿಡಿಎಸ್, ಕುಟುಂಬಶ್ರೀಗಳ ಆಶ್ರಯದಲ್ಲಿ ಬೀಜಂತಡ್ಕ ಅಂಗನವಾಡಿಯಲ್ಲಿ ನಡೆದ ರಾಜ್ಯ ಸರಕಾರದ ವನಿತಾ ಶಿಶುಅಭಿವೃದ್ಧಿ ವಿಭಾಗದ `ವಿಶ್ವ ಸ್ತನ್ಯಪಾನ' ವಾರಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ತನ್ಯಪಾನದ ಪ್ರಾಧಾನ್ಯತೆಯನ್ನು ಮನಗಂಡು ಸರಕಾರವು ತನ್ನ ಎಲ್ಲಾ ಕಚೇರಿಗಳಲ್ಲೂ ಇಂದು ತಾಯಂದಿರಿಗಾಗಿ ವಿಶೇಷ ಕೊಠಡಿಯನ್ನು ಮೀಸಲಿರಿಸಿದೆ. ಮಗುವಿಗೆ ಹಾಲನ್ನು ನೀಡುವುದು ಪ್ರತಿಯೊಬ್ಬ ತಾಯಿಯ ಕರ್ತವ್ಯವಾಗಿದೆ ಹಾಗೂ ಅದನ್ನು ಪಡೆಯುವುದು ಮಗುವಿನ ಹಕ್ಕೂ ಆಗಿದೆ ಎಂದರು.
ಬದಿಯಡ್ಕ ಗ್ರಾಮಪಂಚಾಯಿತಿ ಉಪಾಧ್ಯಕ್ಷೆ ಸೈಬುನ್ನೀಸ ಮೊಯ್ದೀನ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಗ್ರಾ.ಪಂ. ಸದಸ್ಯ ಮುನೀರ್ ಶುಭಾಶಂಸನೆಗೈದು ಮಾತನಾಡಿ, ತಮ್ಮ ಮಕ್ಕಳ ಆರೋಗ್ಯದ ಕಡೆಗೆ ಗಮನವಿರಿಸಬೇಕಾಗಿರುವುದು ಪ್ರತಿಯೋರ್ವ ತಾಯಂದಿರ ಮೊದಲ ಕರ್ತವ್ಯವಾಗಿದೆ. ಇದಕ್ಕೆ ಚ್ಯುತಿಬಾರದಂತೆ ವರ್ತಿಸಬೇಕು ಎಂದರು. ಬದಿಯಡ್ಕ ಸಮುದಾಯ ಆರೋಗ್ಯ ಕೇಂದ್ರ ಆರೋಗ್ಯ ಅಧಿಕಾರಿ ಪ್ರಕಾಶ್ ಸ್ತನ್ಯಪಾನದಿಂದ ಪುಟ್ಟ ಮಕ್ಕಳಿಗೆ ಏನೆಲ್ಲಾ ಪ್ರಯೋಜನಗಳಿವೆ ಎಂಬ ಕುರಿತು ಮಾಹಿತಿಯನ್ನು ನೀಡಿದರು. ನವಜೀವನ ಹೈಯರ್ ಸೆಕೆಂಡರಿ ಶಾಲೆಯ ಪ್ರಾಧ್ಯಾಪಕ ಶ್ರೀನಾಥ್, ಸಮುದಾಯ ಆರೋಗ್ಯ ಕೇಂದ್ರದ ವಿಶಾಲಾಕ್ಷಿ ಉಪಸ್ಥಿತರಿದ್ದರು. ಐಸಿಡಿಎಸ್ ಸಂಚಾಲಕಿ ಜ್ಯೋತಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಐಸಿಡಿಎಸ್ ಸಂಚಾಲಕಿ ಭವ್ಯ ವಂದಿಸಿದರು. ಈ ಸಂದರ್ಭ ಜನತೆಯಲ್ಲಿ ಜಾಗೃತಿಮೂಡಿಸುವ ನಿಟ್ಟಿನಲ್ಲಿ ಸಹಿಸಂಗ್ರಹ ಅಭಿಯಾನಕ್ಕೆ ಚಾಲನೆಯನ್ನು ನೀಡಲಾಯಿತು.
ಸಭಾಕಾರ್ಯಕ್ರಮದ ಬಳಿಕ ಬದಿಯಡ್ಕ ನವಜೀವನ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳು ಸ್ತನ್ಯಪಾನ ಜಾಗೃತಿಯನ್ನು ಮೂಕಾಭಿನಯದ ಮೂಲಕ ಪ್ರದರ್ಶಿಸಿ ಗಮನ ಸೆಳೆದರು. ವಿವಿಧ ಅಂಗನವಾಡಿ ಅಧ್ಯಾಪಿಕೆಯರು, ಸಹಾಯಕಿಯರು, ಆರೋಗ್ಯ ಕಾರ್ಯಕರ್ತೆಯರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.