ಬದಿಯಡ್ಕ: ಕರ್ಕಟಕ ಅಮಾವಾಸ್ಯೆಯ ಅಂಗವಾಗಿ ಬದಿಯಡ್ಕದ ಶ್ರೀನಿಧಿ ಆಸ್ಪತ್ರೆಯಲ್ಲಿ ಗುರುವಾರ ಬೆಳಿಗ್ಗೆಯಿಂದ ದಿನಪೂರ್ತಿ ಹಾಲೆ ಮರದ ಕಷಾಯ ವಿತರಣೆ ನಡೆಯಿತು.
ಖ್ಯಾತ ವೈದ್ಯ ಡಾ.ಶ್ರೀನಿಧಿ ಸರಳಾಯ ಅವರ ಉಸ್ತುವಾರಿಯಲ್ಲಿ ಪ್ರತಿವರ್ಷ ಇಲ್ಲಿ ಉಚಿತ ಕಷಾಯವನ್ನು ವಿತರಿಸಲಾಗುತ್ತಿದ್ದು, ಗುರುವಾರ ಬೆಳಿಗ್ಗೆ ನಿವೃತ್ತ ಪ್ರಾಂಶುಪಾಲ ಮೈರ್ಕಳ ನಾರಾಯಣ ಭಟ್ ಅವರು ಕಷಾಯ ವಿತರಣೆ ಉದ್ಘಾಟಿಸಿ ಚಾಲನೆ ನೀಡಿದರು.
ಹಾಲೆ ಮರದ ಕೆತ್ತೆ ಸಹಿತ ವಿವಿಧ ಆಯುರ್ವೇದ ಔಷಧಿ ಸಸ್ಯಗಳನ್ನು ಬಳಸಿ ತಯಾರಿಸಿದ ವಿಶೇಷ ಕಷಾಯವನ್ನು ಕಳೆದ ಹಲವಾರು ವರ್ಷಗಳಿಂದ ಡಾ.ಶ್ರೀನಿಧಿ ಸರಳಾಯ ಅವರ ನೇತೃತ್ವದಲ್ಲಿ ತಯಾರಿಸಿ ವಿತರಿಸಲಾಗುತ್ತಿದೆ. ಸಂಪ್ರದಾಯಬದ್ದವಾಗಿ ಇಲ್ಲಿ ಹಾಲೆ ಕಷಾಯ ತಯಾರಿಸುತ್ತಿರುವುದರಿಂದ 600ಕ್ಕಿಂತಲೂ ಮಿಕ್ಕಿದ ಜನರು ಆಗಮಿಸಿ ಕಷಾಯ ಸೇವಿಸಿದರು.
ಕಷಾಯ ವಿತರಣೆಗೆ ಚಾಲನೆ ನಿಡಿ ಮಾತನಾಡಿದ ಮೈರ್ಕಳ ನಾರಾಯಣ ಭಟ್ ಅವರು, ದೇಹ, ಮನಸ್ಸುಗಳ ಆರೋಗ್ಯ ಕಾಪಾಡುವಲ್ಲಿ ಆಯುರ್ವೇದ ಸಹಿತ ಸಾಂಪ್ರದಾಯಿಕ ಚಿಕಿತ್ಸಾ ವಿಧಾನಗಳು ಅತ್ಯಂತ ಫಲಪ್ರದವಾಗಿದೆ. ನಂಬಿಕೆ, ಪದ್ದತಿಗಳಂತೆ ಕಾಲಮಾನಕ್ಕೆ ಅನುಗುಣವಾಗಿ ರೀತಿ-ನೀತಿಗಳನ್ನು ಮತ್ತೆ ರೂಢಿಸುವ ಮೂಲಕ ಸೌಖ್ಯ ಕಂಡುಕೊಳ್ಳಬೇಕಿದೆ ಎಂದು ತಿಳಿಸಿದರು.
ಡಾ.ಶ್ರೀನಿಧಿ ಸರಳಾಯ ಅವರು ಮಾತನಾಡಿ, ಭಾರತೀಯ ಜೀವನ ಪದ್ದತಿಯ ಅನುಸರಣೆ ಇಂದು ಮತ್ತೆ ರೂಢಿಸುವ ಅಗತ್ಯ ಇದೆ. ಋತುಮಾನಕ್ಕೆ ಅನುಗುಣವಾದ ಬದುಕುವ ಶೈಲಿಗಳು, ಆಹಾರ-ವಿಹಾರಗಳನ್ನು ಹೊಸ ತಲೆಮಾರಿಗೆ ಮತ್ತೆ ನೆನಪಿಸಬೇಕಿದೆ. ನಂಬಿಕೆಗಳನ್ನು ಬಲಗೊಳಿಸಿ ಸಾಂಪ್ರದಾಯಿಕ ಚಿಕಿತ್ಸೆಗಳ ಅನುಸರಣೆ ಅಗತ್ಯ ಇದೆ ಎಂದು ತಿಳಿಸಿದರು.