ನವದೆಹಲಿ: ಜಗತ್ತಿನ ಪ್ರಸಿದ್ಧ ಚಿಂತಕ ಲಿಯೋ ಟಾಲ್ ಸ್ಟಾಯ್ ಅವರ ವಾರ್ ಅಂಡ್ ಪೀಸ್ ಪ್ರತಿ ಇಟ್ಟುಕೊಂಡಿರುವುದಕ್ಕೆ ಹೋರಾಟಗಾರರನ್ನು ಪ್ರಶ್ನಿಸಿರುವ ಬಾಂಬೆ ಹೈಕೋರ್ಟ್ ಕ್ರಮ ನಿಜಕ್ಕೂ ವಿಲಕ್ಷಣಕಾರಿಯಾದದ್ದು ಎಂದು ಹಿರಿಯ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಆಕ್ಷೇಪಿಸಿದ್ದಾರೆ.
ಲಿಯೋ ಟಾಲ್ ಸ್ಟಾಯ್ ಅವರ ವಾರ್ ಅಂಡ್ ಪೀಸ್ ಪ್ರತಿ, ಸಿಡಿ ತರಹದ ಆಕ್ಷೇಪಾರ್ಹ ವಸ್ತುಗಳನ್ನು ಮನೆಯಲ್ಲಿ ಏಕೆ ಇಟ್ಟುಕೊಂಡಿದ್ದೀರಿ ಎಂಬುದರ ಬಗ್ಗೆ ವಿವರಣೆ ನೀಡುವಂತೆ ಇಲ್ಗಾರ್ ಪರಿಷದ್ -ಭೀಮ್ ಕೋರೆಗಾಂವ್ ಪ್ರಕರಣದ ಆರೋಪಿ ವೆರ್ನಾನ್ ಗೊನ್ಸಾಲ್ವೆಸ್ ಅವರನ್ನು ಬಾಂಬೆ ಹೈಕೋರ್ಟ್ ಬುಧವಾರ ಕೇಳಿತ್ತು.
ವೆರ್ನಾನ್ ಗೊನ್ಸಾಲ್ವೆಸ್ ಮತ್ತಿತರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ಸಾರಂಗ್ ಕೊತ್ವಾಲ್ ನೇತೃತ್ವದ ಏಕ ಸದಸ್ಯ ಪೀಠ, ವಾರ್ ಅಂಡ್ ಪೀಸ್ ರೀತಿಯ ಪುಸ್ತಕ, ಸಿಡಿಗಳನ್ನು ಮನೆಗಳನ್ನು ಇಟ್ಟುಕೊಂಡಿದ್ದಕ್ಕೆ ಆಕ್ಷೇಪಿಸಿತ್ತು. ಈ ಬಗ್ಗೆ ನಿನ್ನೆ ಪ್ರತಿಕ್ರಿಯಿಸಿರುವ ಜೈರಾಮ್ ರಮೇಶ್, ಟಾಲ್ ಸ್ಟಾಯ್ ಮಹಾತ್ಮ ಗಾಂಧಿ ಮೇಲೆ ಪ್ರಭಾವ ಬೀರಿದ್ದಂತಹವರು. ಅಂತಹವರ ಪುಸ್ತಕವನ್ನು ಮನೆಯಲ್ಲಿ ಇಟ್ಟುಕೊಂಡಿದ್ದಕ್ಕೆ ನ್ಯಾಯಾಲಯ ಪ್ರಶ್ನಿಸಿರುವುದು ನಿಜಕ್ಕೂ ವಿಲಕ್ಷಣಕಾರಿಯಾಗಿದೆ. ನವ ಭಾರತಕ್ಕೆ ಸ್ವಾಗತ ಎಂದು ಟ್ವೀಟ್ ಮಾಡಿದ್ದಾರೆ.