ಬದಿಯಡ್ಕ: ರಸ್ತೆ ಸುರಕ್ಷಾ ವಾರಾಚರಣೆ `ಶುಭಯಾತ್ರೆ'ಯ ಭಾಗವಾಗಿ ಟ್ರಾಫಿಕ್ ಜಾಗೃತಿಯ ಕುರಿತಾಗಿ ಬದಿಯಡ್ಕದಲ್ಲಿ ಕರಪತ್ರ ವಿತರಿಸಲಾಯಿತು. ಬದಿಯಡ್ಕ ನವಜೀವನ ಹೈಯರ್ ಸೆಕೆಂಡರಿ ಶಾಲೆಯ ಸ್ಟೂಡೆಂಟ್ ಪೊಲೀಸ್ ಕೆಡೆಟ್ ತಂಡದ ಸದಸ್ಯರು ಹಾಗೂ ಬದಿಯಡ್ಕ ಜನಮೈತ್ರಿ ಪೊಲೀಸ್‍ನ ನೇತೃತ್ವದಲ್ಲಿ ಪೇಟೆಗೆ ಆಗಮಿಸುವ ವಾಹನ ಚಾಲಕರಿಗೆ ಬದಿಯಡ್ಕ ಪೊಲೀಸ್ ಠಾಣೆಯ ಮುಂಭಾಗದಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಅರಿವನ್ನು ಮೂಡಿಸುವ ಕರಪತ್ರವನ್ನು ನೀಡಿ ವಾಹನ ತಪಾಸಣೆ ನಡೆಸಲಾಯಿತು. ಬದಿಯಡ್ಕ ಪೊಲೀಸ್ ಠಾಣಾ ಅಧಿಕಾರಿ ಅನೀಶ್ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಶಾಲಾ ವಿದ್ಯಾರ್ಥಿ ಪೊಲೀಸ್ ತಂಡವು ವಾಹನಗಳನ್ನು ತಡೆದಾಗ ಚಾಲಕರು ಗಲಿಬಿಲಿಗೊಂಡರೂ ವಿದ್ಯಾರ್ಥಿಗಳಿಗೆ ಸಹಕರಿಸಿದರು. ಪೊಲೀಸರ ಅನುಮತಿಯೊಂದಿಗೆ ಚಾಲಕರ ಪರವಾನಿಗೆ, ದಾಖಲೆ ಪತ್ರಗಳನ್ನು ಪರಿಶೀಲಿಸಿದರು. ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು, ಪರವಾನಿಗೆ ಇಲ್ಲದೆ ವಾಹನಗಳ ಚಾಲನೆಯನ್ನು ಮಾಡಬಾರದು ಮೊದಲಾದ ಮಾಹಿತಿಗಳನ್ನು ವಿದ್ಯಾರ್ಥಿಗಳು ಚಾಲಕರಿಗೆ ನೀಡಿದರು. ಹೆಲ್ಮೆಟ್ ಧರಿಸದ ದ್ವಿಚಕ್ರ ವಾಹನ ಚಾಲಕರಿಗೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ತಿಳಿಸಿದ ವಿದ್ಯಾರ್ಥಿ ಪೊಲೀಸರು ಧರಿಸದಿರುವುದರಿಂದ ಉಂಟಾಗುವ ತೊಂದರೆಗಳನ್ನು ವಿವರಿಸಿದರು. ಜನಮೈತ್ರಿ ಪೊಲೀಸ್ ಅಧಿಕಾರಿಗಳಾದ ಸುಕುಮಾರನ್, ರಾಮಕೃಷ್ಣನ್, ವಿಪಿನ್ ರೋಬರ್ಟ್, ಅನೂಪ್, ಸಿಪಿಒ ಕೃಷ್ಣ ಯಾದವ್ ಅಗಲ್ಪಾಡಿ, ಎಸಿಪಿಒ ವನಜಕುಮಾರಿ, ಡ್ರಿಲ್ ಇನ್ಸ್‍ಪೆಕ್ಟರ್ ಶಿವರಾಮನ್, ಅಧ್ಯಾಪಕರುಗಳಾದ ರಾಜೇಶ್ ಮಾಸ್ತರ್ ಅಗಲ್ಪಾಡಿ, ಸೋಮನಾಥ ಮಾಸ್ತರ್, ಯು.ಜಿ.ಶಿವಪ್ರಸಾದ್ ಮಾಸ್ತರ್ ಸಹಕರಿಸಿದರು.