ಕುಂಬಳೆ: ಶಬರಿಮಲೆ ಶ್ರೀ ಅಯ್ಯಪ್ಪ ಸೇವಾ ಸಮಾಜ ಭಾರತದಾದ್ಯಂತ ಸೆ.21 ರಿಂದ ಅ.21 ರ ವರೆಗೆ ನಡೆಸಲಿರುವ ಅಯ್ಯಪ್ಪ ಧರ್ಮ ಪ್ರಚಾರ ರಥ ಯಾತ್ರೆಯ ಯಶಸ್ವಿಗಾಗಿ ಕುಂಬಳೆ ಪಂಚಾಯತಿ ಮಟ್ಟದ ಸ್ವಾಗತ ಸಮಿತಿ ರೂಪೀಕರಣ ಸಭೆ ಇಂದು(ಆ.4) ಬೆಳಿಗ್ಗೆ 10 ಗಂಟೆಗೆ ಕುಂಬಳೆ ಶ್ರೀ ಅಯ್ಯಪ್ಪ ದೇವಸ್ಥಾನದಲ್ಲಿ ನಡೆಯಲಿದೆ.
ಹೊಸಂಗಡಿ ಶ್ರೀ ಅಯ್ಯಪ್ಪ ಮಂದಿರದಲ್ಲಿ ನಡೆದ ಮಂಜೇಶ್ವರ ತಾಲೂಕು ಮಟ್ಟದ ಸ್ವಾಗತ ಸಮಿತಿ ರೂಪೀಕರಣ ಸಭೆಯಲ್ಲಿ ಎಲ್ಲಾ ಪಂಚಾಯತಿ ಮಟ್ಟದಲ್ಲೂ ಸ್ವಾಗತ ಸಮಿತಿ ರೂಪೀಕರಿಸಲು ನಿರ್ಧರಿಸಲಾಗಿದೆ. ಕುಂಬಳೆಯಲ್ಲಿ ಇಂದು ನಡೆಯುವ ಸಭೆಯಲ್ಲಿ ನಿವೃತ್ತ ಉಪಜಿಲ್ಲಾಧಿಕಾರಿ ಶಶಿಧರ ಶೆಟ್ಟಿ ಸಹಿತ ಹಲವಾರು ಗಣ್ಯರು ಭಾಗವಹಿಸುವರು. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಥಯಾತ್ರೆಯ ಯಶಸ್ವಿಗಾಗಿ ಸೂಕ್ತ ಸಲಹೆ ಸಹಕಾರ ನೀಡಬೇಕೆಂದು ತಾಲೂಕು ಸ್ವಾಗತ ಸಮಿತಿ ಅಧ್ಯಕ್ಷ ನ್ಯಾಯವಾದಿ ಕೆ.ರಾಮ ಪಾಟಾಳಿ ವಿನಂತಿಸಿದ್ದಾರೆ.