ನವದೆಹಲಿ: ಕಾಶ್ಮೀರ ವಿಷಯವಾಗಿ ಕಾಲು ಕೆರೆಯುತ್ತಿರುವ ಪಾಕಿಸ್ತಾನಕ್ಕೆ ಭಾರತ ಮತ್ತೆ ಬಿಸಿ ಮುಟ್ಟಿಸಿದ್ದು, ಭಾರತದ ಆಂತರಿಕ ಮತ್ತು ಸೂಕ್ಷ್ಮ ವಿಚಾರದಲ್ಲಿ ಪಾಕಿಸ್ತಾನದ ಪ್ರಧಾನಿ ಮತ್ತು ಸಚಿವರು ಬೇಜಬಾಬ್ದಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಜಮ್ಮು-ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಹರ್ಯಾಣ ಮುಖ್ಯಮಂತ್ರಿ ಎಂ.ಎಲ್.ಖಟ್ಟರ್ ನೀಡಿರುವ ಹೇಳಿಕೆಗಳನ್ನು ಪಾಕಿಸ್ತಾನದ ಸಚಿವರು ವಿಶ್ವಸಂಸ್ಥೆಗೆ ಬರೆದಿರುವ ಪತ್ರದಲ್ಲಿ ಉಲ್ಲೇಖ ಮಾಡಿರುವುದು ವಿವಾದ ಹುಟ್ಟುಹಾಕಿದೆ. ಇದೇ ವಿಚಾರವಾಗಿ ಇದೀಗ ಪಾಕಿಸ್ತಾನವನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಭಾರತ ನೆರೆಯ ರಾಷ್ಟ್ರದ ಜವಾಬ್ದಾರಿಗಳನ್ನು ಗಮನದಲ್ಲಿಟ್ಟುಕೊಂಡು ಜವಾಬ್ದಾರಿಯುತವಾಗಿ ನಡೆದುಕೊಳ್ಳುವಂತೆ ಖಡಕ್ ಎಚ್ಚರಿಕೆ ನೀಡಿದೆ.
ಈ ಕುರಿತಂತೆ ಮಾತನಾಡಿರುವ ಭಾರತೀಯ ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್? ಕುಮಾರ್ ಅವರು, 'ಭಾರತದ ಆಂತರಿಕ ಮತ್ತು ಸೂಕ್ಷ್ಮ ವಿಚಾರದಲ್ಲಿ ಪಾಕಿಸ್ತಾನದ ಪ್ರಧಾನಿ ಮತ್ತು ಸಚಿವರು ಬೇಜಬಾಬ್ದಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಭಾರತದ ಆಂತರಿಕ ವಿಚಾರವಾಗಿ ಪಾಕಿಸ್ತಾನದ ನಾಯಕರು ನೀಡುತ್ತಿರುವ ಬೇಜವಾಬ್ದಾರಿ ಹೇಳಿಕೆಗಳು ಮತ್ತು ಟ್ವೀಟ್ ಗಳನ್ನು ಭಾರತ ಖಂಡಿಸುತ್ತದೆ ಎಂದು ತಿರುಗೇಟು ನೀಡಿದ್ದಾರೆ.
'ಪಾಕಿಸ್ತಾನ ಸಹಜ ನೆರೆಯ ದೇಶದಂತೆ ವರ್ತಿಸಲಿ. ಸಹಜವಾಗಿ ಮಾತನಾಡಲಿ, ಸಹಜವಾಗಲಿ ವ್ಯವಹರಿಸಲಿ. ಇದು ಪಾಕಿಸ್ತಾನದಿಂದ ನಡೆಯುತ್ತಿರುವ ವಿಷಯವಲ್ಲ. ನಾವು ಅವರೊಂದಿಗೆ ಸಹಜ ನೆರೆ ದೇಶದಂತೆ ವರ್ತಿಸುತ್ತೇವೆ. ಅವರು ನೆರೆ ದೇಶದ ಮೇಲೆ ಭಯೋತ್ಪಾದಕರನ್ನು ಛೂ ಬಿಡುವ ಕೆಲಸ ಮಾಡದಿರಲಿ ಎಂದು ಕಿಡಿಕಾರಿದರು. ಅಂತೆಯೇ ಗುಜರಾತ್? ಕರಾವಳಿ ಪ್ರದೇಶದಲ್ಲಿ ಹೈಅಲರ್ಟ್? ಘೋಷಣೆ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ರವೀಶ್? ಕುಮಾರ್, ಪಾಕಿಸ್ತಾನದ ಉಗ್ರ ಕಮಾಂಡೋಗಳು ಗುಜರಾತ್ ಮೂಲಕ ಒಳನುಸುಳಲು ಯತ್ನಿಸುತ್ತಿದ್ದಾರೆ. ಜಲಮಾರ್ಗದ ಮೂಲಕ ಭಾರತದ ಒಳನುಸುಳಿಸಿ ಕೋಮು ಸಮಸ್ಯೆ ಹುಟ್ಟುಹಾಕಲು ಅಥವಾ ಭಯೋತ್ಪಾದಕ ದಾಳಿ ಎಸಗಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.
ಭಾರತದ ವಿಮಾನಗಳು ತನ್ನ ವಾಯುಸೀಮೆಯಲ್ಲಿ ಸಂಚರಿಸೋದಕ್ಕೆ ಈವರೆಗೂ ಪಾಕಿಸ್ತಾನ ನಿಬರ್ಂಧ ಹೇರಿಲ್ಲ ಎಂದು ವಿದೇಶಾಂಗ ಇಲಾಖೆ ಸ್ಪಷ್ಟಪಡಿಸಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವುದೇ ರೀತಿಯ ಹಿಂಸಾಚಾರ ನಡೆದಿಲ್ಲ ಎಂದ ರವೀಶ್ ಕುಮಾರ್, ದಿನೇ ದಿನೇ ಪರಿಸ್ಥಿತಿ ಸುಧಾರಿಸುತ್ತಿದೆ ಎಂದಿದ್ದಾರೆ. ಪಾಕಿಸ್ತಾನದಲ್ಲಿರೋ ಉಗ್ರರು ಭಾರತದೊಳಗೆ ನುಸುಳಲು ಹರಸಾಹಸ ನಡೆಸುತ್ತಿದ್ದಾರೆ, ಹೀಗಾಗಿ ಉಗ್ರವಾದವನ್ನು ಪಾಕಿಸ್ತಾನ ತನ್ನ ನೆಲದಿಂದಲೇ ನಿರ್ಮೂಲನೆ ಮಾಡಬೇಕೆಂದು ವಿದೇಶಾಂಗ ಇಲಾಖೆ ಆಗ್ರಹಿಸಿದೆ.