ಬದಿಯಡ್ಕ: ವಿವಿಧ ಭಾಷೆ, ಜಾತಿ, ಪಂಗಡಗಳ ತವರೂರಾದ ಭಾರತದಲ್ಲಿ ಜನರು ಪರಸ್ಪರ ಸೌಹಾರ್ಧತೆಯಿಂದ ಬಾಳಿ ಬದುಕುವ ಮೂಲಕ ದೇಶದಲ್ಲಿ ಶಾಂತಿ ಸಹನೆ ನೆಮ್ಮದಿ ಉಳಿಯಬೇಕು. ಪರಸ್ಪರ ಸಹೋದರತೆಯ ಭಾವನೆಯಿಂದ ಮುನ್ನಡೆದರೆ ಮಾತ್ರ ನಾವು ಜೀವನದಲ್ಲಿ ಪ್ರಗತಿಯನ್ನು ಕಾಣಬಹುದು ಎಂದು ಕಾಸರಗೋಡು ಸರಕಾರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಎ.ಶ್ರೀನಾಥ್ ಅಭಿಪ್ರಾಯಪಟ್ಟರು.
ಎಸ್‍ಕೆಎಸ್‍ಎಸ್‍ಎಫ್ ಕುಂಬ್ಡಾಜೆ ಕ್ಲಸ್ಟರ್ ವತಿಯಿಂದ ಮಂಗಳವಾರ ಮಾರ್ಪನಡ್ಕ ಜಯನಗರದಲ್ಲಿ ಜರಗಿದ ವಿಶ್ವ ಸೌಹಾರ್ಧ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಒಂದೇ ಮಣ್ಣಿನ ನೆಲದಲ್ಲಿ ಬದುಕುವ ನಾವು ಕುಡಿಯುವ ನೀರು ಒಂದೇ ಆಗಿದೆ. ನಮ್ಮ ಭಾಷೆ ಬೇರೆಯಾದರೂ ನಮ್ಮ ಭಾವನೆ ಬೇರೆಯಾಗಬಾರದು. ಎಲ್ಲರೂ ಸಮನ್ವತೆಯಿಂದ ಬಾಳಿದರೆ ಊರು ಪ್ರಗತಿಯನ್ನು ಕಾಣಲು ಸಾಧ್ಯವಿದೆ ಎಂದರು. ಸಂಸ್ಕಾರ, ಸಂಸ್ಕøತಿಗಳು ಮನೆಯಿಂದ ಆರಂಭಗೊಳ್ಳಬೇಕು. ಅಂತಹ ಯುವ ಸಮೂಹ ಸತ್ಪಥದಲ್ಲಿ ಮುನ್ನಡೆಯಲು ಸಾಧ್ಯ ಎಂದು ತಿಳಿಸಿದರು.
ಎಸ್‍ಕೆಎಸ್‍ಎಸ್‍ಎಫ್ ಕುಂಬ್ಡಾಜೆ ಕ್ಲಸ್ಟರ್ ಅಧ್ಯಕ್ಷ ಬಷೀರ್ ಮೌಲವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ರಾಜೇಶ್ ಮಾಸ್ತರ್ ಅಗಲ್ಪಾಡಿ, ವಾಸುದೇವ ಭಟ್ ಚೋಕೆಮೂಲೆ, ಹರೀಶ್ ಕುಣಿಕುಳ್ಳಾಯ ಉಬ್ರಂಗಳ ಶುಭಾಶಂಸನೆಗೈದರು. ಎಸ್‍ಕೆಎಸ್‍ಎಸ್‍ಎಫ್ ಬದಿಯಡ್ಕ ವಲಯ ಪ್ರಧಾನ ಕಾರ್ಯದರ್ಶಿ ಖಲೀಲ್ ಮಾಸ್ತರ್ ಬೆಳಿಂಜ ಸ್ವಾಗತಿಸಿ, ಲತೀಫ್ ಮಾರ್ಪನಡ್ಕ ವಂದಿಸಿದರು.