ನವದೆಹಲಿ: ಒಂದು ಕೋಟಿ ರೂಪಾಯಿಗೂ ಅಧಿಕ ನಗದು ವಿತ್ ಡ್ರಾ ಮೇಲೆ ಶೇಕಡಾ 2ರಷ್ಟು ಟಿಡಿಎಸ್ ಕಡಿತ ಮಾಡಲಾಗುವುದು ಎಂದು ಆದಾಯ ಇಲಾಖೆ ತಿಳಿಸಿದ್ದು ಇಂದಿನಿಂದಲೇ ಜಾರಿಗೆ ಬರಲಿದೆ.
ನಿನ್ನೆವರೆಗೆ 1 ಕೋಟಿ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚು ನಗದನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿ ಈಗಾಗಲೇ ಗ್ರಾಹಕರು ವಿತ್ ಡ್ರಾ ಮಾಡಿದ್ದರೆ ಅವರಿಗೆ ಸಹ ಶೇಕಡಾ 2ರಷ್ಟು ಟಿಡಿಎಸ್ ಕಡಿತ ಅನ್ವಯವಾಗುತ್ತದೆ.
ಕಳೆದ ಕೇಂದ್ರ ಬಜೆಟ್ ನಲ್ಲಿ 1 ಕೋಟಿ ರೂಪಾಯಿಗೆ ಅಧಿಕ ಹಣವನ್ನು ವಿತ್ ಡ್ರಾ ಮಾಡಿದ ಗ್ರಾಹಕರ ಮೇಲೆ ಶೇಕಡಾ 2ರಷ್ಟು ಟಿಡಿಎಸ್ ಹಾಕುವುದಾಗಿ ಪ್ರಕಟಿಸಿತ್ತು. ಬ್ಯಾಂಕುಗಳಲ್ಲಿ ನಗದು ವಹಿವಾಟುಗಳಿಗೆ ಕಡಿವಾಣ ಹಾಕಿ ಡಿಜಿಟಲ್ ಮೂಲಕ ವ್ಯವಹಾರ ಉತ್ತೇಜಿಸಲು ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ.
ಸೆಪ್ಟೆಂಬರ್ 1ರಿಂದ ಮೊದಲು 1 ಕೋಟಿಗಿಂತ ಕಡಿಮೆ ನಗದು ಮೊತ್ತ ವಿತ್ ಡ್ರಾ ಮಾಡಿದ್ದರೆ ಟಿಡಿಎಸ್ ಅನ್ವಯವಾಗುವುದಿಲ್ಲ, ಆದರೆ ಹಣಕಾಸು ಕಾಯ್ದೆ 194 ಎನ್ ನಡಿಯಲ್ಲಿ ಏಪ್ರಿಲ್ 1ರಿಂದ ಇಲ್ಲಿಯವರೆಗೆ ನಗದು ವಿತ್ ಡ್ರಾ ಮಾಡಿ ಅದರ ಮೊತ್ತ 1 ಕೋಟಿ ರೂಪಾಯಿ ದಾಟಿದ್ದರೆ ಶೇಕಡಾ 2ರಷ್ಟು ಟಿಡಿಎಸ್ ಕಡಿತವಾಗುತ್ತದೆ.
ಅಲ್ಲದೆ ಆಗಸ್ಟ್ 31ರವರೆಗೆ ವ್ಯಕ್ತಿ ಬ್ಯಾಂಕ್, ಸಹಕಾರಿ ಬ್ಯಾಂಕುಗಳು ಅಥವಾ ಪೋಸ್ಟ್ ಆಫೀಸ್ ಗಳಿಂದ ವಿತ್ ಡ್ರಾ ಮಾಡಿದ ಹಣದ ಮೊತ್ತ 1 ಕೋಟಿ ಅಥವಾ ಅದಕ್ಕಿಂತ ಹೆಚ್ಚಾದರೆ ಇನ್ನು ಮುಂದಿನ ವಿತ್ ಡ್ರಾಗಳಿಗೆಲ್ಲ ಶೇಕಡಾ 2ರಷ್ಟು ಟಿಡಿಎಸ್ ಕಡಿತ ಅನ್ವಯವಾಗುತ್ತದೆ.