ಗುವಾಹಟಿ: ಅಸ್ಸಾಂ ರಾಷ್ಟ್ರೀಯ ನಾಗರಿಕರ ದಾಖಲಾತಿ(ಎನ್ ಆರ್ ಸಿ) ಅಂತಿಮ ವರದಿ ಹೊರಬಿದ್ದಿದ್ದು ಸುಮಾರು 19 ಲಕ್ಷಕ್ಕೂ ಅಧಿಕ ಮಂದಿಯ ಹೆಸರು ಈ ದಾಖಲಾತಿ ವರದಿಯಲ್ಲಿಲ್ಲ.
ಎನ್ ಆರ್ ಸಿ ದಾಖಲಾತಿಯಲ್ಲಿ ತಮ್ಮ ಹೆಸರು ಸೇರ್ಪಡೆಗೆ ಒಟ್ಟಾರೆ 3 ಕೋಟಿಯ 30 ಲಕ್ಷದ 27 ಸಾವಿರದ 661 ಮಂದಿ ಅರ್ಜಿ ಸಲ್ಲಿಸಿದ್ದರು. ಸಂವಿಧಾನ ವಿಧಿ 4(3)ರಡಿಯಲ್ಲಿ ಜನರು ಸಲ್ಲಿಸಿದ ದಾಖಲಾತಿಗಳನ್ನು ಪರಿಶೀಲಿಸಿದ ನಂತರ ಅಂತಿಮ ಎನ್ ಆರ್ ಸಿ ವರದಿಯಲ್ಲಿ 3 ಕೋಟಿಯ 11 ಲಕ್ಷದ 21 ಸಾವಿರದ 4 ಮಂದಿ ಭಾರತೀಯ ನಾಗರಿಕತೆಗೆ ಅರ್ಹರಾಗಿದ್ದು, ಅರ್ಜಿ ಸಲ್ಲಿಸದವರು ಹಾಗೂ ಅನರ್ಹ ಅರ್ಜಿಗಳು ಸೇರಿ 19 ಲಕ್ಷದ 6 ಸಾವಿರದ 657 ಮಂದಿ ಅಸ್ಸಾಂ ನಾಗರಿಕರ ಪಟ್ಟಿಯಿಂದ ಹೊರಬಿದ್ದಿದ್ದಾರೆ ಎಂಬ ಅಂಕಿಅಂಶದ ಮಾಹಿತಿ ಸಿಕ್ಕಿದೆ.
ಕಳೆದ ವರ್ಷ ಎನ್ ಆರ್ ಸಿ ಪ್ರಕಟಿಸಿದ್ದ ಕರಡು ವರದಿ ಮತ್ತು ಈ ವರ್ಷಾರಂಭದಲ್ಲಿ ಪ್ರಕಟಿಸಿದ್ದ ಮತ್ತೊಂದು ಕರಡು ವರದಿಯಲ್ಲಿ 41 ಲಕ್ಷದ 9 ಸಾವಿರ ಮಂದಿಯನ್ನು ನಾಗರಿಕ ದಾಖಲಾತಿ ಪಟ್ಟಿಯಿಂದ ಹೊರಗಿಡಲಾಗಿತ್ತು.