ರಾಯಚೂರು: ಬೆಂಗಳೂರಿನ ಇಸ್ರೋ ಸಂಸ್ಥೆ ನಡೆಸಿದ ಸ್ಪರ್ಧೆಯಲ್ಲಿ ಸಿಂಧನೂರಿನ ಡಾಡಿಲ್ಸ್ ಕಾನ್ಸೆಪ್ಟ್ ಪ್ರೌಢಶಾಲೆಯ 9 ನೇ ತರಗತಿ ವಿದ್ಯಾರ್ಥಿ ವೈಷ್ಣವಿ ಜಿ ನಾಗರಾಜ ಆಯ್ಕೆಯಾಗಿದ್ದು, ಸೆಪ್ಟೆಂಬರ್ 7 ರಂದು ಚಂದ್ರಯಾನ-2 ನೌಕೆ ಇಳಿಯುವ ಅಭೂತಪೂರ್ವ ಕ್ಷಣವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ವೀಕ್ಷಣೆ ಮಾಡಲಿದ್ದಾರೆ.
ಈ ಕುರಿತಂತೆ ಡಾಡಿಲ್ಸ್ ಕಾನ್ಸೆಪ್ಟ್ ಪ್ರೌಢಶಾಲೆಯ ಕಾರ್ಯದರ್ಶಿ ಲಕ್ಷ್ಮೀ ನಾರಾಯಣ ನಂದಿಗಂ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರದ ಕಚೇರಿಯಲ್ಲಿ ಚಂದ್ರನ ಅಂಗಳದಲ್ಲಿ ಚಂದ್ರಯಾನ-2 ನೌಕೆ ಇಳಿಯುವ ಈ ಅಭೂತಪೂರ್ವ ಕ್ಷಣವನ್ನು ಪ್ರಧಾನಮಂತ್ರಿ ಹಾಗೂ ವಿ ಜ್ಞಾ ನಿಗಳೊಂದಿಗೆ ವೀಕ್ಷಣೆ ಮಾಡಲಿದ್ದಾರೆ.
ಇದನ್ನು ವೀಕ್ಷಿಸಲು ದೇಶದ ಪ್ರೌಢಶಾಲಾ ವಿಭಾಗದಲ್ಲಿ ಪ್ರತಿ ರಾಜ್ಯದಿಂದ ಇಬ್ಬರು ವಿದ್ಯಾರ್ಥಿಗಳನ್ನು ಆನ್ ಲೈನ್ ಸ್ಪರ್ಧೆಯ ಮೂಲಕ ಆಯ್ಕೆ ಮಾಡಿದ್ದು, ನಮ್ಮ ಶಾಲೆಯ ವಿದ್ಯಾರ್ಥಿ ಆಯ್ಕೆಯಾಗಿದ್ದು ಹೆಮ್ಮೆಯ ವಿಷಯವಾಗಿದೆ ಎಂದರು.
ಇಸ್ರೋ ನಡೆಸಿದ ಆನ್ ಲೈನ್ ಸ್ಪರ್ಧೆಯಲ್ಲಿ ಸುಮಾರು 50 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದು, ಬಾಲಕಿಯರ ವಿಭಾಗದಲ್ಲಿ ಕರ್ನಾಟಕದ ಪರವಾಗಿ ನಮ್ಮ ಶಾಲೆಯ ವಿದ್ಯಾರ್ಥಿನಿ ವೈಷ್ಣವಿ ಜಿ ನಾಗರಾಜ ಆಯ್ಕೆಯಾಗಿದ್ದು, ರಾಯಚೂರು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ. ನಮ್ಮ ಶಾಲೆಯೂ ಹಲವಾರು ವರ್ಷಗಳಿಂದಲೇ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ನಿರಂತರವಾಗಿ ಸಾಧನೆ ಮಾಡುತ್ತಲೇ ಬಂದಿದೆ ಎಂದರು.