ಬದಿಯಡ್ಕ: ಸರ್ಕಾರವು ಕೈಗೊಳ್ಳಬೇಕಾದ ಅನೇಕ ಕೆಲಸಗಳನ್ನು ಇಂದು ಸಾಯಿರಾಂ ಭಟ್ ಅವರ ಕುಟುಂಬವು ಮಾಡುತ್ತಿದೆ. ಪ್ರತಿಫಲಾಪೇಕ್ಷೆ ಇಲ್ಲದ ಸೇವೆಗೆ ಮಿಗಿಲಾದುದಿಲ್ಲ. ಜನಮಾನಸದಲ್ಲಿ ಸದಾ ನೆಲೆಯೂರುವಂತಹ ಇಂತಹ ಕಾರ್ಯಗಳನ್ನು ಮಾಡುತ್ತಿರುವ ಸಾಯಿರಾಂಭಟ್ ಅವರ ಸೇವೆ ಶ್ಲಾಘನೀಯ ಎಂದು ಕಾಸರಗೋಡು ಜಿಲ್ಲಾಧಿಕಾರಿ ಡಾ. ಡಿ.ಸಜಿತ್ ಬಾಬು ತಿಳಿಸಿದರು.
ಕೊಡುಗೈ ದಾನಿ ಸಾಯಿರಾಂ ಗೋಪಾಲಕೃಷ್ಣ ಭಟ್ ಅವರು ಅರ್ಹ ಬಡವರಿಗೆ ಉಚಿತವಾಗಿ ಕೊಡಮಾಡುವ 257ನೇ ಮನೆಯ ಕೀಲಿಕೈಯನ್ನು ಕಿಳಿಂಗಾರು ಸಾಯಿರಾಂಭಟ್ ಅವರ ನಿವಾಸದಲ್ಲಿ ಫಲಾನುಭವಿ ಚೆಂಗಳ ಗ್ರಾಮಪಂಚಾಯಿತಿಯ ಗೋಪಾಲ ಅರ್ತಿಪ್ಪಳ್ಳ ಅವರಿಗೆ ಹಸ್ತಾಂತರಿಸಿ ಅಭಿಪ್ರಾಯವ್ಯಕ್ತಪಡಿಸಿದರು.
ಬದಿಯಡ್ಕ ಗ್ರಾಮಪಂಚಾಯಿತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ ಪ್ರಾರಂಭದಲ್ಲಿ ಒಂದು ಮನೆಗೆ 45000ಕ್ಕೂ ಮಿಕ್ಕಿ ವೆಚ್ಚ ತಗಲುತ್ತಿತ್ತು. ಪ್ರಸ್ತುತ ಅದರ ಖರ್ಚು ಆರುಪಟ್ಟು ಹೆಚ್ಚಾಗಿದೆ. ರಾಜಕೀಯಾತೀತವಾಗಿ ಎಲ್ಲ ಜನರ ಅಭಿವೃದ್ಧಿಯನ್ನು ಮನಗಂಡು ಈ ಯೋಜನೆಯನ್ನು ನಾವು ನಡೆಸಿಕೊಂಡು ಬರುತ್ತಿದ್ದೇವೆ. ಮಹಿಳೆಯರ ಸ್ವ ಉದ್ಯೋಗಕ್ಕಾಗಿ 250ಕ್ಕೂ ಹೆಚ್ಚು ಟೈಲರಿಂಗ್ ಮೆಶಿನ್‍ಗಳನ್ನು ನೀಡಲಾಗಿದೆ. 19 ಕುಡಿಯುವ ನೀರು ಯೋಜನೆ, ಸಾಮೂಹಿಕ ವಿವಾಹವನ್ನೂ ನಡೆಸಲಾಗಿದೆ. ಕಿಳಿಂಗಾರಿನ ಸಾಯಿಮಂದಿರದಲ್ಲಿ ಪ್ರತೀವಾರ ಉಚಿತವಾಗಿ ವೈದ್ಯಕೀಯ ಶಿಬಿರವೂ ನಡೆಯುತ್ತಿದ್ದು, ಜನರು ಇದರ ಪ್ರಯೋಜನವನ್ನು ಪಡೆದಾಗ ಮನಸ್ಸಿಗೆ ನೆಮ್ಮದಿ ಲಭಿಸುತ್ತದೆ ಎಂದರು. ಸಾಯಿರಾಂ ಗೋಪಾಲಕೃಷ್ಣ ಭಟ್ ದಂಪತಿಗಳು ಹಾಗೂ ಕುಟುಂಬಸ್ಥರು, ಗ್ರಾಮಪಂಚಾಯಿತಿ ಸ್ಥಾಯಿಸಮಿತಿ ಅಧ್ಯಕ್ಷ ಶ್ಯಾಮಪ್ರಸಾದ ಮಾನ್ಯ, ಸದಸ್ಯರುಗಳಾದ ಡಿ.ಶಂಕರ, ಜಯಶ್ರೀ, ಕಾರ್ಯದರ್ಶಿ ಪ್ರದೀಪ್, ಎಂ.ಎಚ್.ಜನಾರ್ಧನ ಮೊದಲಾದವರು ಜೊತೆಗಿದ್ದರು.