ಬದಿಯಡ್ಕ: ಬದಿಯಡ್ಕ ಶ್ರೀ ಗಣೇಶಮಂದಿರದಲ್ಲಿ ಭಾನುವಾರ ಪೂರ್ವಾಹ್ನ ಕನ್ಯಾಲಗ್ನ ಸುಮುಹೂರ್ತದಲ್ಲಿ ವೇದಮೂರ್ತಿ ಪಳ್ಳತ್ತಡ್ಕ ಪರಮೇಶ್ವರ ಭಟ್ ಇವರ ಪೌರೋಹಿತ್ಯದಲ್ಲಿ ನೂತನ ಗಣೇಶ ಗುಡಿಯ ಉದ್ಘಾಟನೆ, ಶ್ರೀದೇವರ ಉಬ್ಬುಚಿತ್ರ ಪ್ರತಿಷ್ಠಾಪನೆ ವಿಧಿವಿಧಾನಗಳು ನೂರಾರು ಭಕ್ತಾದಿಗಳ ಪ್ರಾರ್ಥನೆಯೊಂದಿಗೆ ವಿಜೃಂಭಣೆಯಿಂದ ನೆರವೇರಿತು. ಹಿಂದಿನ ದಿನ ರಾತ್ರಿ ರಾಕ್ಷೋಘ್ನ ಹೋಮ, ವಾಸ್ತುಬಲಿ, ವಿವಿಧ ವೈದಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು. ಭಾನುವಾರ ಬೆಳಗ್ಗೆ ಸೂರಂಬೈಲು ಶ್ರೀ ಗಣೇಶ ಭಜನಾ ಮಂಡಳಿಯವರು ಭಜನಾ ಸೇವೆ ನಡೆಸಿಕೊಟ್ಟರು. ಮಧ್ಯಾಹ್ನ ವೇದಮೂರ್ತಿ ವೆಂಕಟೇಶ್ವರ ಭಟ್ ಪಟ್ಟಾಜೆ ಮಹಾಪೂಜೆ ನಡೆಸಿಕೊಟ್ಟರು. ಸಹಸ್ರಾರು ಮಂದಿ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀದೇವರ ಪ್ರಸಾದ, ಭೋಜನ ಪ್ರಸಾದವನ್ನು ಸ್ವೀಕರಿಸಿದರು.
48ನೇವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ :
ಸೆ.2 (ಇಂದು) ಪ್ರಾತಃಕಾಲ ಶ್ರೀ ಮಹಾಗಣಪತಿ ಪ್ರತಿಷ್ಠೆ, ಧ್ವಜಾರೋಹಣ, ರಾಷ್ಟ್ರಗೀತೆ, ಸುಪ್ರಭಾತ, ಗಣಪತಿ ಹೋಮ, ಭಜನೆ, 9ರಿಂದ ವಿವಿಧ ಸ್ಪರ್ಧೆಗಳ ಪ್ರಾರಂಭ, 10.30ರಿಂದ ಡಾ. ಸೂರ್ಯ ಎನ್.ಶಾಸ್ತ್ರಿ ಬದಿಯಡ್ಕ ಇವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ, ಹಿಂದೂ ಐಕ್ಯವೇದಿ ಕೇರಳ ರಾಜ್ಯ ಕಾರ್ಯದರ್ಶಿ ಕೆ.ಪಿ.ಹರಿದಾಸ್ ಇವರಿಂದ ಧಾರ್ಮಿಕ ಉಪನ್ಯಾಸ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನದಾನ. ಅಪರಾಹ್ನ 2ರಿಂದ ಯಕ್ಷಗಾನ ಬಯಲಾಟ `ಮಹಿಷಮರ್ಧಿನಿ', ಸಂಜೆ 6 ಗಂಟೆಯಿಂದ ಬದಿಯಡ್ಕ ಗಣೇಶ ಭಕ್ತವೃಂದ ಮಹಿಳಾ ಘಟಕ ಇವರಿಂದ ತಿರುವಾದಿರ, 6.30ರಿಂದ ಭರತನಾಟ್ಯ ಪ್ರವೀಣೆ ರಾಧಿಕಾ ಶೆಟ್ಟಿ ಮತ್ತು ಬಳಗದವರಿಂದ ನಾಟ್ಯಸಿಂಚನ, ರಾತ್ರಿ 9.00ರಿಂದ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದ್ದು, ಮಂಗಳವಾರ ಅಪರಾಹ್ನ 2.30ರಿಂದ ಶ್ರೀ ದೇವರ ಭವ್ಯ ಶೋಭಾಯಾತ್ರೆ, ವಿಗ್ರಹ ವಿಸರ್ಜನೆ ಜರಗಲಿದೆ.