ನ್ಯೂಯಾರ್ಕ್: ಇತ್ತೀಚಿಗೆ ವಿಶ್ವಸಂಸ್ಥೆ ಹವಾಮಾನ ಶೃಂಗದಲ್ಲಿ ವಿಶ್ವ ನಾಯಕರನ್ನೇ ತರಾಟೆಗೆ ತೆಗೆದುಕೊಂಡಿದ್ದ ಸ್ವೀಡನ್ ದೇಶದ ಯುವ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್ಬರ್ಗ್ ಹಾಗೂ ಇತರ 15 ಮಕ್ಕಳು, ವಿಶ್ವದ ಐದು ಶ್ರೀಮಂತ ರಾಷ್ಟ್ರಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದ್ದು, ಹವಾಮಾನ ವೈಫರೀತ್ಯ ತಡೆಗೆ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ವಿಶ್ವಸಂಸ್ಥೆಯಲ್ಲಿ ದೂರು ದಾಖಲಿಸಿದ್ದಾರೆ.
ವಿಶ್ವಸಂಸ್ಥೆಯ ಹವಾಮಾನ ಶೃಂಗಸಭೆಯಲ್ಲಿ ವಿಶ್ವದ ನಾಯಕರನ್ನು ತರಾಟೆಗೆ ತೆಗೆದುಕೊಂಡ ಕೆಲ ದಿನಗಳಲ್ಲೇ ಐದು ರಾಷ್ಟ್ರಗಳ ವಿರುದ್ಧ ದೂರನ್ನು ದಾಖಲಿಸಲಾಗಿದೆ. 'ಹವಾಮಾನ ವೈಫರೀತ್ಯದಿಂದ ಜನರು ನರಳುತ್ತಾ, ಸಾಯುತ್ತಿದ್ದಾರೆ. ನಿಮ್ಮ ಸುಳ್ಳಿನ ಭರವಸೆಗಳ ಮೂಲಕ ನಮ್ಮ ಕನಸುಗಳು ಹಾಗೂ ಬಾಲ್ಯವನ್ನು ಕಸಿದುಕೊಂಡಿದ್ದೀರಿ, ಆದರೂ, ನಾನು ಅದೃಷ್ಟಶಾಲಿಗಳಲ್ಲಿ ಒಬ್ಬರು '' ಎಂದು ಹೇಳುವ ಮೂಲಕ ಸೋಮವಾರ ವಿಶ್ವದ ನಾಯಕರ ವಿರುದ್ಧ ಗ್ರೆಟಾ ಥನ್ಬರ್ಗ್ ಕಿಡಿಕಾರಿದ್ದರು.
ಜರ್ಮನಿ, ಫ್ರಾನ್ಸ್, ಬ್ರೆಜಿಲ್, ಅಜೆರ್ಂಟೀನಾ ಮತ್ತು ಟರ್ಕಿ ರಾಷ್ಟ್ರಗಳ ವಿರುದ್ಧ ದೂರು ದಾಖಲಿಸಲಾಗಿದೆ. ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ತಮ್ಮ ಜವಾಬ್ದಾರಿಯನ್ನು ಎತ್ತಿಹಿಡಿಯುವಲ್ಲಿ ಈ ರಾಷ್ಟ್ರಗಳು ವಿಫಲವಾಗಿವೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.