ಮಥುರಾ: ಶ್ರೀಕೃಷ್ಣನ ಜನ್ಮಸ್ಥಾನವಾದ ಮಥುರಾದ ಎಂಟು ಪಂಚಾಯಿತಿಗಳು ವರದಕ್ಷಿಣೆ, ಮದ್ಯ ಸೇವನೆ ಮತ್ತು 'ಶ್ರಾದ್ಧ' ದಂತಹಾ ಅಪರಕರ್ಮ ಆಚರಣೆಗಳಲ್ಲಿ ಅದ್ದೂರಿ ಸಂಪ್ರದಾಯಗಳನ್ನು ನಿಷೇಧಿಸಿ ಆದೇಶ ಹೊರಡಿಸಿವೆ.
ಭಾನುವಾರ ನಡೆದ ಪಂಚಾಯತ್ ಸಭೆಯಲ್ಲಿ ಪಾಲ್ಗೊಂಡಿದ್ದ ಭೂ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ಚೌಧರಿ ಗೋವಿಂದ್ ಸಿಂಗ್, ಈ ಉಪಕ್ರಮವು ಸ್ಥಳೀಯ ನಿವಾಸಿಗಳಿಗೆ ಒಳಿತನ್ನುಂಟುಮಾಡುತ್ತದೆ ಹಾಗೂ ಹೆಚ್ಚುವರಿ ಆರ್ಥಿಕ ಹೊರೆ ಎದುರಿಸದಂತೆ ತಡೆಯುತ್ತದೆ, ಜತೆಗೆ ಸಾಮಾಜಿಕ ವಾತಾವರಣವನ್ನು ಸುಧಾರಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಸಾಮಾಜಿಕ ಒತ್ತಡಗಳಿಂದಾಗಿ ವರದಕ್ಷಿಣೆ ಹಗೂ ಅದ್ದೂರಿ ಸಂಪ್ರದಾಯಗಳ ಆಚರಣೆಗಳು ನಡೆಯುತ್ತದೆ. ಆದರೆ ಹಾಗೆ ಅವರು ಸಂಪ್ರದಾಯ ಪಾಲನೆ ಮಾಡಿದಾಗ ಹಾಗೂ ವರದಕ್ಷಿಣೆ ನೀಡಿದ ಬಳಿಕ ಮಾಡಿದ ಸಾಲ ತೀರಿಸಲು ವರ್ಷಗಳೇ ಕಳೆದು ಹೋಗುತ್ತದೆ. "ನಮ್ಮ ಪ್ರಯತ್ನಗಳು ಈ ತಪ್ಪು ಅಭ್ಯಾಸಗಳನ್ನು ನಿಲ್ಲಿಸಿ ಜನರಿಗೆ ವಾಸ್ತವತೆಯ ಅರಿವು ಮೂಡಿಸುವುದು. ಉದಾಹರಣೆಗೆ, ವರದಕ್ಷಿಣೆ ವರನ ಕುಟುಂಬಕ್ಕೆ ಲಂಚ ನೀಡುವುದಕ್ಕಿಂತ ಬೇರೆಯಲ್ಲ. ಇದಕ್ಕೆ ಬದಲು ಹುಡುಗಿಗೆ ಶಿಕ್ಷಣ ನೀಡಿ ಅವಳಿಗೆ ಉದ್ಯೋಗ ದೊರಕಿಸಿಕೊಡುವಂತೆ ಂಆಡಿ ಅವಳನ್ನು ಆರ್ಥಿಕ ಸ್ವಾವಲಂಬಿಯನ್ನಾಗಿಸಬೇಕು. ಆದರೆ ಜನರು ಇದನ್ನು ಮಾಡುವ ಹೊರತಾಗಿ ಅದ್ದೂರಿ ಮದುವೆಗಳಿಗಾಗಿ ಹಣ ವ್ಯಯಿಸುತ್ತಿದ್ದಾರೆ"ಅವರು ಹೇಳಿದರು.
ಅಮಲ್ ಪಟ್ಟಿ, ಸಿಂಘಾ ಪಟ್ಟಿ, ಸಾವುಂಕ್ ದೇಹತ್, ಲೋರಿಹಾ ಪಟ್ಟಿ, ನಾನುಪಟ್ಟಿ, ಬಚ್ಗಾಂವ್ ಸೇರಿದಂತೆ ಏಳು ಗ್ರಾಮಗಳ ನಿವಾಸಿಗಳು ಈ ಆಚರಣೆಗಳ ನಿಷೇಧವನ್ನು ತಕ್ಷಣದಿಂದ ಜಾರಿಗೆ ತರಲು ಅನುಮತಿಸಿದ್ದಾರೆ.
ಪ್ರತಿ ಗ್ರಾಮದಲ್ಲಿ ಐದು ಸದಸ್ಯರ ಸಮಿತಿಯನ್ನು ರಚಿಸಲಾಗುವುದು, ಇದು ಸ್ಥಳೀಯ ನಿವಾಸಿಗಳೊಂದಿಗೆ ಸಂವಹನ ನಡೆಸುತ್ತದೆ ಮತ್ತು ಈ ದುಷ್ಟ ಪದ್ಧತಿಗಳಿಂದಾಗುವ ಪರಿಣಾಮಗಳ ಬಗೆಗೆ ಅವರಿಗೆ ತಿಳುವಳಿಕೆ ನೀಡುತ್ತದೆ ಎಂದು ಜಿಲ್ಲಾ ಪಂಚಾಯತ್ ಪ್ರತಿನಿಧಿ ಭರತ್ ಸಿಂಗ್ ಹೇಳಿದ್ದಾರೆ.