ಕಾಸರಗೋಡು: ಕಳೆದ ವರ್ಷದ ಆಗಸ್ಟ್ ತಿಂಗಳಂತೆ ಈ ವರ್ಷದ ಅಗಸ್ಟ್ ಕೂಡಾ ಕೇರಳದ ಜನರಿಗೆ ಕರಾಳ ದಿನವಾಗಿದೆ. ರಾಜ್ಯದಲ್ಲಿ ದುರಂತಕ್ಕೆ ಪ್ರಕೃತಿ ಕಾರಣವಲ್ಲ. ಇದಕ್ಕೆ ರಾಜ್ಯದಲ್ಲಿ ಬದಲಿ ಬದಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಮತ್ತು ಸಿಪಿಎಂನ ಅವೈಜ್ಞಾನಿಕ ವ್ಯವಸ್ಥೆಗಳೇ ಪ್ರಮುಖ ಕಾರಣವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯ ಪಿ.ಕೆ.ಕೃಷ್ಣದಾಸ್ ಆರೋಪಿಸಿದ್ದಾರೆ.
ಕಾಸರಗೋಡು ಹೊಸ ಬಸ್ ನಿಲ್ದಾಣದ ಸಮೀಪವಿರುವ ಕ್ಯಾಪಿಟಲ್ ಇನ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಬಿಜೆಪಿ ಕಾಸರಗೋಡು ಜಿಲ್ಲಾ ನಾಯಕತ್ವ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಈ ಬಾರಿ ನಡೆದ ಪ್ರಕೃತಿ ವಿಕೋಪಗಳಿಗೆ ಇಲ್ಲಿನ ಕಗ್ಗಲು ಕ್ವಾರೆಗಳು ಕೂಡ ಪ್ರಮುಖ ಕಾರಣವಾಗಿದೆ. ಎರಡೂ ಸರಕಾರಗಳು ಯಥೇಚ್ಛ ಪಡೆದು ಇವರಿಗೆ ಅನುಮತಿ ನೀಡುತ್ತಿದ್ದಾರೆ. ಕಾಂಗ್ರೆಸ್ ಮತ್ತು ಸಿಪಿಎಂ ಪಕ್ಷಗಳನ್ನು ಕೇರಳದ ಜನರು ಅ„ಕಾರದಿಂದ ಹೊರದಬ್ಬಬೇಕು. ಆಗ ಮಾತ್ರವೇ ರಾಜ್ಯದ ದುರಂತವು ನಿವಾರಣೆಗೊಳ್ಳಲಿದೆ. ಕೇರಳದ ಈ ಎರಡು ರಾಜಕೀಯ ಪಕ್ಷಗಳು ನಿಜಕ್ಕೂ ತ್ಯಾಜ್ಯಗಳಿಂದ ಕೂಡಿದ ರಾಜಕೀಯ ಪಕ್ಷಗಳಾಗಿವೆ ಎಂದು ಪಿ.ಕೆ.ಕೃಷ್ಣದಾಸ್ ಲೇವಡಿ ಮಾಡಿದರು.
ಸಿಪಿಎಂ ಈಗಾಗಳೇ ತ್ರಿಪುರ, ಪಶ್ಚಿಮ ಬಂಗಾಳದಲ್ಲಿ ಹೀನಾಯ ಸೋಲು ಅನುಭವಿಸಿದೆ. ಕೇರಳದಲ್ಲಿಯೂ ಇನ್ನು ಹೆಚ್ಚುಕಾಲ ಸಿ.ಪಿ.ಎಂ ಇರುವುದಿಲ್ಲ. ಜನರಿಗೆ ಬಿಜೆಪಿ ಬಗ್ಗೆ ಹೆಚ್ಚಿನ ಆಕಾಂಕ್ಷೆ ಇದೆ. ಕಾಂಗ್ರೆಸ್ ಇದುವರೆಗು ಪ್ರಜಾಪ್ರಭುತ್ವ ರೀತಿಯಲ್ಲಿ ಪಕ್ಷದ ಚುನಾವಣೆ ನಡೆಸಿಲ್ಲ. ಬಿಜೆಪಿ ಇತರ ಪಕ್ಷಗಳಿಗಿಂತ ಭಿನ್ನವಾಗಿ ಕಾರ್ಯಚಟುವಟಿಕೆ ನಡೆಸುತ್ತಿದೆ. ಪಕ್ಷದ ಸದಸ್ಯತ್ವ ಅಭಿಯಾನವು ಜುಲೈ 6 ರಂದು ಆರಂಭಗೊಂಡಿದ್ದು ಆ.30ಕ್ಕೆ ಸಮಾಪ್ತಿಗೊಳ್ಳುವುದು ಸಂಘಟನಾ ಚುನಾವಣೆಯು ಸೆ.11 ರಂದು ಆರಂಭಗೊಳ್ಳುವುದು ಎಂದು ಪಿ.ಕೆ.ಕೃಷ್ಣದಾಸ್ ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಕೇರಳ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಎಂ.ಗಣೇಶ್ ಮಾತನಾಡಿದರು. ರಾಷ್ಟ್ರೀಯ ಸಮಿತಿ ಸದಸ್ಯ ಎಂ.ಸಂಜೀವ ಶೆಟ್ಟಿ, ರಾಜ್ಯ ಉಪಾಧ್ಯಕ್ಷೆ ಪ್ರಮೀಳಾ ಸಿ.ನಾಯ್ಕ್, ರಾಜ್ಯ ಸೆಲ್ ಸಂಯೋಜಕ ಕೆ.ರಂಜಿತ್, ಉತ್ತರ ವಲಯ ಸಹ ಸಂಘಟನಾ ಕಾರ್ಯದರ್ಶಿ ಓ.ವೈ.ಸುರೇಶ್, ರಾಜ್ಯ ಸಮಿತಿ ಸದಸ್ಯ ರವೀಶ್ ತಂತ್ರಿ ಕುಂಟಾರು, ನ್ಯಾಯವಾದಿ ವಿ.ಬಾಲಕೃಷ್ಣ ಶೆಟ್ಟಿ, ಸುರೇಶ್ ಕುಮಾರ್ ಶೆಟ್ಟಿ ಪೂಕಟ್ಟೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ವೇಲಾಯುಧನ್ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿಧನ ಹೊಂದಿದ ಬಿಜೆಪಿ ನೇತಾರ ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ಭಾವಚಿತ್ರಕ್ಕೆ ಕಾರ್ಯಕರ್ತರು ಪುಷ್ಪಾರ್ಚನೆ ನಡೆಸಿದರು.