ನವದೆಹಲಿ: ಬೇಹುಗಾರಿಕೆ ಆರೋಪದಲ್ಲಿ ಪಾಕಿಸ್ತಾನದ ಜೈಲಿನಲ್ಲಿರುವ ನೌಕಾಪಡೆ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಭೇಟಿ ಮಾಡಲು ನಾಳೆ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳಿಗೆ ಅವಕಾಶ ನೀಡುವುದಾಗಿ ಪಾಕಿಸ್ತಾನ ತಿಳಿಸಿದೆ.
ಪಾಕಿಸ್ತಾನದ ವಿದೇಶಾಂಗ ಕಚೇರಿಯ ಅಧಿಕೃತ ಟ್ವೀಟ್ ಮೂಲಕ ಈ ಮಾಹಿತಿಯನ್ನು ನೀಡಿದೆ. ವಿಯನ್ನಾ ಒಪ್ಪಂದ, ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಪು ಮತ್ತು ಪಾಕಿಸ್ತಾನದ ಕಾನೂನಿಗನುಗುಣವಾಗಿ ಸೋಮವಾರ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳು ಭೇಟಿ ಮಾಡಲು ಅವಕಾಶ ನೀಡುವುದಾಗಿ ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಡಾ. ಮೊಹಮ್ಮದ್ ಪೈಸಲ್ ಟ್ವೀಟ್ ಮಾಡಿದ್ದಾರೆ.
ಜುಲೈ 17ರಂದು ಜಾಧವ್‍ಗೆ ವಿಧಿಸಿರುವ ಗಲ್ಲುಶಿಕ್ಷೆ ತೀರ್ಪನ್ನು ಅಮಾನತು ಮಾಡಿದ ಅಂತಾರಾಷ್ಟ್ರೀಯ ನ್ಯಾಯಾಲಯ, ಜಾಧವ್ ಅವರನ್ನು ಭೇಟಿ ಮಾಡಲು ಮತ್ತು ಅವರು ಕಾನೂನಾತ್ಮಕ ನೆರವು ಒದಗಿಸಲು ಭಾರತದ ರಾಜತಾಂತ್ರಿಕರಿಗೆ ಅವಕಾಶ ನೀಡುವಂತೆ ಆದೇಶ ಹೊರಡಿಸಿತ್ತು. ಅಷ್ಟೆ ಅಲ್ಲದೆ, 42 ಪುಟಗಳ ತೀರ್ಪುನಲ್ಲಿ ವಿಯೆನ್ನಾ ಒಪ್ಪಂದವನ್ನು ಪಾಕಿಸ್ತಾನ ಉಲ್ಲಂಘಿಸಿದೆ ಎಂದು ಆದೇಶದಲ್ಲಿ ತಿಳಿಸಲಾಗಿತ್ತು.
ಇಲ್ಲಿಯವರೆಗೂ ಪಾಕ್ ಸರಕಾರದ ಪ್ರಸ್ತಾಪಕ್ಕೆ ಭಾರತ ಸರಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪಾಕಿಸ್ತಾನದ ಈ ಪ್ರಸ್ತಾಪವನ್ನು ಪರಿಶೀಲಿಸುತ್ತಿರುವ ಭಾರತ, ಕಾನ್ಸುಲರ್ ಆಕ್ಸಸ್ ತೆಗೆದುಕೊಳ್ಳುತ್ತದೆಯೋ, ಇಲ್ಲವೋ ಎನ್ನುವುದು ನಾಳೆ ತಿಳಿಯಲಿದೆ. ಮರಣದಂಡನೆ ಶಿಕ್ಷೆ ವಿಧಿಸಿದ ಬಳಿಕ ಇದೇ ಮೊದಲ ಬಾರಿಗೆ ಕುಲಭೂಷಣ್ ಭೇಟಿಗೆ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳಿಗೆ ಪಾಕಿಸ್ತಾನ ಅವಕಾಶ ನೀಡುತ್ತಿದೆ.