ಪೆರ್ಲ: ನಮ್ಮ ಪರಂಪರೆ, ಆಚಾರ ಅನುಷ್ಠಾನಗಳು ಎಲ್ಲಾ ಕಾಲಘಟ್ಟಗಳಲ್ಲೂ ಸಮಾಜಕ್ಕೆ ಪ್ರಸ್ತುತವಾಗುವ ರೀತಿಯಲ್ಲಿದೆ.ರಾಷ್ಟ್ರೀಯ ವಿಚಾರಗಳು ಮುನ್ನೆಲೆಗೆ ಬಂದಾಗ ಅದುವೇ ದೊಡ್ಡ ರೀತಿಯ ಬೆಳಕಾಗುವುದು ಎಂದು ಖ್ಯಾತ ಯಕ್ಷಗಾನ ಕಲಾವಿದ ರವಿ ಅಲೆವೂರಾಯ ವಗರ್ಕಾಡಿ ತಿಳಿಸಿದರು.
ಶಬರಿಮಲೆ ಅಯ್ಯಪ್ಪ ಸೇವಾ ಸಮಾಜ ಆಶ್ರಯದಲ್ಲಿ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಾನದಿಂದ ಪ್ರಜ್ವಲಿಸಿದ ದೀಪ ಜ್ಯೋತಿಯೊಂದಿಗೆ ಹೊರಟ ಅಯ್ಯಪ್ಪ ಧರ್ಮ ಪ್ರಚಾರ ರಥಯಾತ್ರೆಗೆ ಅಯ್ಯಪ್ಪ ರಥಯಾತ್ರೆ ಸೇವಾ ಸಮಿತಿ ಎಣ್ಮಕಜೆ ಪೆರ್ಲ ನೇತೃತ್ವದಲ್ಲಿ ಭಾನುವಾರ ಬೆಳಗ್ಗೆ ಇಡಿಯಡ್ಕದಲ್ಲಿ ಭವ್ಯ ಸ್ವಾಗತ ನೀಡಿದ ಬಳಿಕ ಸಂಜೆ ಪೆರ್ಲ ಸತ್ಯನಾರಾಯಣ ಮಂದಿರ ಪರಿಸರದಲ್ಲಿ ನಡೆದ ಧಾರ್ಮಿಕ ಸಮಾರಂಭದಲ್ಲಿ ಮುಖ್ಯ ಭಾಷಣದಲ್ಲಿ ಅವರು ಮಾತನಾಡಿದರು.
ಶಬರಿಮಲೆ ಶ್ರೀ ಅಯ್ಯಪ್ಪ ದೇವಾಲಯಕ್ಕೆ ಅದರದೇ ಆದ ಕಟ್ಟುಪಾಡು ಇದೆ.ದೇಗುಲಕ್ಕೆ ಪ್ರವೇಶ ಪಡೆಯುವ ಮುನ್ನ ಅಯ್ಯಪ್ಪ ವ್ರತಧಾರಿ ಭಕ್ತರು ಮಂಡಲ ಪೂಜೆಯೇ ಮೊದಲಾದ ವಿಧಿ ವಿಧಾನಗಳು,ದೈಹಿಕ ಹಾಗೂ ಮಾನಸಿಕವಾಗಿ ಕಠಿಣ ವ್ರತಾಚರಣೆಗಳನ್ನು ಪಾಲಿಸ ಬೇಕಾಗಿದೆ.ನೂರಾರು ವರ್ಷಗಳ ಅನುಷ್ಠಾನಗಳ ವಿಚಾರಗಳಲ್ಲಿ ಕೇರಳ ಸರಕಾರವು ಮೂಗು ತೂರಿಸಿರುವುದು ಹಲವು ವಿವಾದಗಳಿಗೆ ಕಾರಣವಾಗಿದೆ.ಸರಕಾರದ ದಬ್ಬಾಳಿಕೆ ನೀತಿ ಸಹಸ್ರ ಸಾವಿರ ಅಯ್ಯಪ್ಪ ಭಕ್ತರ ಭಾವನೆಗಳನ್ನು ಘಾಸಿ ಗೊಳಿಸಿದೆ. ಆಚಾರ ಅನುಷ್ಠಾನ ವಿಚಾರಗಳಲ್ಲಿ ಜನರನ್ನು ಒಗ್ಗೂಡಿಸಿ, ಜಾಗೃತಿ ಮೂಡಿಸ ಬೇಕಾಗಿರುವುದು ಇಂದಿನ ಅಗತ್ಯ. ಮುಕ್ತ ಚರ್ಚೆ ಹಾಗೂ ಸಂವಾದ ಸಾಧ್ಯವಾಗುವಂತಹ ವಾತಾವರಣದಲ್ಲಿ ಜನರು ಸ್ವತಂತ್ರವಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.ಇದರಿಂದ ಸಮಾಜವು ಪ್ರಗತಿಯ ದಾರಿಯಲ್ಲಿ ಸಾಗುವುದು.ಕೆಲವು ವಿಚಾರಗಳು ಕೆಲವೊಂದು ಮಂದಿಗೆ ಈಗಿನ ಸಂದರ್ಭಕ್ಕೆ ಸೂಕ್ತವಾಗಿ ಕಾಣದಿದ್ದರೂ ಭವಿಷ್ಯದಲ್ಲಿ ಅದನ್ನು ಒಪ್ಪಿಕೊಳ್ಳಲೇ ಬೇಕಾದ ಪರಿಸ್ಥಿತಿ ಬರಲಿದೆ. ಮಕ್ಕಳಿಗೆ ಆಶಯ ಸಂಸ್ಕೃತಿಗಳನ್ನು ತಿಳಿಸಿಕೊಡುವುದು ಇಂದಿನ ಅಗತ್ಯ.ಮೂರು ನಾಲ್ಕು ದಶಕಗಳ ಹಿಂದೆ ನಡೆದ ತುರ್ತು ಪರಿಸ್ಥಿತಿ, ಅಯೋಧ್ಯೆಯ ಆಂದೋಲನದ ವಿಷಯಗಳು ಇಂದಿನ ಯುವ ತಲೆಮಾರಿಗೆ ತಿಳಿದಿಲ್ಲ.ಸಮಾಜ ಅಧ್ಯಯನ ಪಾಠಗಳಲ್ಲೂ ಭಾರತದ ಸೋಲುಗಳ ಬಗ್ಗೆ ತಿಳಿಸಲು ಒತ್ತು ನೀಡಲಾಗಿದೆ.ನಾವು ಗೆಲ್ಲಲು ಹೊರಟವರು, ಆದರೆ ಸಮಾಜಕ್ಕೆ ದೃಷ್ಟಿ ಕೊಡುವವರ ಕೊರತೆ ಎದುರಾಗಿದೆ.ಸಾಮಾಜಿಕ ಭೋಗ ಜೀವನಕ್ಕೆ ಒಗ್ಗಿ ಕೊಂಡು ಕಳಂಕಿತರಾಗುತ್ತಿದ್ದೇವೆ. ಇಂದು ನಮ್ಮಲ್ಲಿ ಸಂಘಟನೆ ಕೊರತೆ ಎದ್ದು ಕಾಣುತ್ತಿದೆ. ಬೋಧನೆ, ಶೋಧನೆಗಳು ಇಂದಿನ ಅಗತ್ಯವಾಗಿದೆ. ಧರ್ಮವನ್ನು ರಕ್ಷಣೆಮಾಡುವ ಧರಿತ್ರಿಯ ನೆಲದಲ್ಲಿ ಗೋವು ಎಂಬುದೂ ಧರ್ಮವಾಗಿದೆ.ವೃತ್ತಿಗೆ ಅನುಸರಿಸಿ ಅವರವರ ಧರ್ಮವನ್ನು ಪಾಲಿಸಬೇಕು.ಅದೇ ರೀತಿ ಸಾಮಾಜಿಕ ಸಾಮರಸ್ಯಗಳು ನಮ್ಮಲ್ಲಿ ಮೂಡಬೇಕು . ಮನೆಯನ್ನು ನಡೆಸುವ ಹೆಣ್ಣಿಗೆ ಸಮಾಜವನ್ನು ಮುನ್ನಡೆಸುವ ಜವಾಬ್ದಾರಿ ಇದೆ.ಮಕ್ಕಳಿಗೆ ಗೆಲುವಿನ ಕಥನಗಳನ್ನು ತಿಳಿ ಹೇಳಿ ಕೊಡಲು ಜೀಜಾ ಬಾಯಿಯಂತಹ ಮಾತೆಯರು ಭಾರತದ ಇಂದಿನ ಅಗತ್ಯ ಎಂದರು.
ವಿಟ್ಲ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆ ಪ್ರಾಂಶುಪಾಲ ಜಯರಾಮ ರೈ ಕಾಟುಕುಕ್ಕೆ ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿ, ಸನಾತನ ಹಿಂದೂ ಧರ್ಮ ಎಂದೂ ಅಳಿಯದ, ಚಿರಂತನ, ನಿರಂತರವಾದ ಧರ್ಮ, ನಿಯಮಾವಳಿ.ಉಳಿದ ಧರ್ಮಗಳಂತೆ ಸನಾತನ ಧರ್ಮಕ್ಕೆ ಸೃಷ್ಟಿಕರ್ತರು ಯಾರೂ ಇಲ್ಲದ ಆಧ್ಯಾತ್ಮಿಕ ಸನಾತನ ಧರ್ಮದ ಆಧ್ಯಾತ್ಮಿಕದ ತೊಟ್ಟಿಲು' ಎಂದೇ ಕರೆಯಲಾಗಿದೆ.ಯಾವುದನ್ನೂ ತಿರಸ್ಕರಿಸದೆ, ಪ್ರತಿಯೊಂದಕ್ಕೂ ತನ್ನೊಡಲಲ್ಲಿ ಜಾಗ ನೀಡಿ ತಾಯ್ತನ ಮೆರೆದ ವಿಶ್ವದ ಅತ್ಯಂತ ಪುರಾತನ ಸಂಸ್ಕೃತಿ, ಎಲ್ಲ ಧರ್ಮಗಳ ತಾಯಿ' ಸನಾತನ ಹಿಂದು ಧರ್ಮವಾಗಿದೆ. ಹಿಂದೂ ಧರ್ಮದಲ್ಲಿ ಆಸ್ತಿಕರು, ನಾಸ್ತಿಕರು ಎಂಬ ಹಲವು ಗುಂಪಿಗೆ ಸೇರಿದವರನ್ನು ಗುರುತಿಸಬಹುದಾದರೂ ಹೆಚ್ಚಿನ ಸಂಖ್ಯೆಯಲ್ಲಿ ಆಸ್ತಿಕರನ್ನು ಕಾಣಬಹುದಾಗಿದೆ.ಈ ಧರ್ಮದ ಹೆಚ್ಚಿನ ದರ್ಶನಗಳು ನಾಸ್ತಿಕವಾದದಿಂದ ರೂಪುಗೊಂಡಿರುವುದು ಇತರ ಧರ್ಮಗಳಿಗಿಂತ ಈ ಧರ್ಮವನ್ನು ವಿಶಿಷ್ಟವನ್ನಾಗಿಸಿದೆ.ಹಿಂದು ಎಂಬುದು ಧರ್ಮವಲ್ಲ, ಮನುಕುಲ ಬದುಕಬೇಕಾದ ಜೀವನ ಪದ್ಧತಿ. ಹಿಂದು ಸಂಸ್ಕೃತಿಯನ್ನು ಅನುಸರಿಸುವುದು ಮನುಜಕುಲ ತನ್ನ ಕಲ್ಯಾಣವನ್ನು ತಾನೇ ಕಂಡುಕೊಳ್ಳುವ ಮಾರ್ಗವಾಗಿದೆ.ಜಗತ್ತಿನ ಎಲ್ಲ ರಾಷ್ಟ್ರಗಳು ಒಂದೇ ಕುಟುಂಬ ಎಂದು ಪ್ರತಿಪಾದಿಸಿದ ವಸುದೈವ ಕುಟುಂಬಕಂ ಎಂಬ ತತ್ವವನ್ನು ಪಸರಿಸಿದರೆ ವಿಶ್ವ ಕಲ್ಯಾಣ ಬಯಸುವ ಭಾರತ ವಿಶ್ವಗುರುವಾಗಿ ಜಗತ್ತಿನ ಸಾರಥ್ಯ ವಹಿಸಿಕೊಳ್ಳಲಿದೆ ಎಂದರು.
ಸಾಮಾಜಿಕ ಕಾರ್ಯಕರ್ತೆ ಶ್ಯಾಮಲಾ ಪತ್ತಡ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತವು ಸಪ್ತ ನದಿಗಳ ನೆಲೆ ಬೀಡಾಗಿದೆ.ಪುರಾತನ ಕಾಲದಿಂದಲೂ, ನದಿಗಳು ಹಾಗೂ ನದಿಗಳ ನೀರನ್ನು ಅತ್ಯಂತ ಪೂಜ್ಯಭಾವನೆಯಿಂದ ಪರಿಗಣಿಸಲಾಗಿದೆ.ಸಾಮಾಜಿಕ-ಆರ್ಥಿಕ ಹಾಗೂ ಸಾಂಸ್ಕೃತಿಕ ರೂಪರೇಷೆಗಳ ವಿಕಸನಕ್ಕೆ ನದಿಗಳು ಮೂಲವಾಗಿವೆ. ಜನಜೀವನವನ್ನು ರೂಪಿಸುವ, ಭೌತಿಕ ಹಾಗೂ ಆಧ್ಯಾತ್ಮಿಕ ಪೋಷಣೆ ಮಾಡುವ ಮೂಲವಾಗಿ, ಪೂಜ್ಯನೀಯ ಭಾವದಿಂದ ವೇದದ ಋಷಿ-ಮುನಿಗಳು ಪರಿಗಣಿಸಿದ್ದಾರೆ.ನದಿ, ಪ್ರಕೃತಿ ಗೋವುಗಳ ನಡುವೆ ಅವಿನಾಭಾವ ಸಂಬಂಧವಿದ್ದು ಮಾನವನ ಎಲ್ಲಾ ಆಗುಹೋಗುಗಳ ದೈವಿಕ ಸಾಕ್ಷಿಯಾಗಿದೆ.ಅಯ್ಯಪ್ಪ ವ್ರತಧಾರಿಗಳು ಅಯ್ಯಪ್ಪ ದರ್ಶನದ ಬಳಿಕವೂ ವ್ರತಾನುಷ್ಠಾನ, ಕರ್ಮ ನಿಷ್ಠೆಗಳನ್ನು ಪಾಲಿಸಬೇಕು ಎಂದರು.ಕಾಸರಗೋಡು ಜಿಲ್ಲಾ ಬೈರ ಸೇವಾ ಸಮಿತಿ ಅಧ್ಯಕ್ಷ ರಮೇಶ್ ಕುರಡ್ಕ, ಜಿಲ್ಲಾ ಸಮಿತಿ ಸದಸ್ಯ ಶ್ರೀಧರ ಗುರುಸ್ವಾಮಿ ಉಪಸ್ಥಿತರಿದ್ದರು.
ಸ್ವಾಗತ ಸಮಿತಿ ಅಧ್ಯಕ್ಷ ರವಿಚಂದ್ರ ಸೂರ್ಡೇಲು ಸ್ವಾಗತಿಸಿ, ಉಪಾಧ್ಯಕ್ಷ ಸುಜಿತ್ ರೈ ಬಜಕೂಡ್ಲು ವಂದಿಸಿದರು. ಉದಯ 'ಶುಭಂ' ನಿರೂಪಿಸಿದರು.