HEALTH TIPS

ಖಂಡಿಗೆ ಶಾಮ ಭಟ್ಟರ ಅಪೂರ್ವ ವ್ಯಕ್ತಿತ್ವ ಆದರ್ಶ ಸಮಾಜದ ಹೆಗ್ಗುರುತು-ಎಡನೀರು ಶ್ರೀಗಳು-ಶಾಮ ಭಟ್ ಶತಮಾನೋತ್ಸವ ಸಮಾರೋಪ-ಶತಮಾನೋತ್ಸವ ಭವನ ಲೋಕಾರ್ಪಣೆ


     ಬದಿಯಡ್ಕ: ಬದುಕನ್ನು ಸಮರ್ಪಣಾ ಭಾವದಿಂದ ಮುನ್ನಡೆಸಿದಾಗ ಜೀವನ ಸಾರ್ಥಕ್ಯವೆನಿಸುತ್ತದೆ. ಸಾರ್ಥಕ ಬದುಕು ನೆನಪುಗಳನ್ನು ಅಜರಾಮರಗೊಳಿಸಿ ಜೀವನ ವಿಶಾಲತೆಯ ಪರಿಕಲ್ಪನೆಗೆ ಹೆಚ್ಚು ಮೆರುಗನ್ನು ನೀಡುತ್ತದೆ. ಹೀಗೆ ಬದುಕಿದ ಖಂಡಿಗೆ ಶಾಮ ಭಟ್ ಅವರಂತಹ ಅಪೂರ್ವ ವ್ಯಕ್ತಿತ್ವ ಆದರ್ಶ ಸಮಾಜದ ಹೆಗ್ಗುರುತುಗಳು ಎಂದು ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳು ತಿಳಿಸಿದರು.
     ಖಂಡಿಗೆ ಶಾಮ ಭಟ್ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಭಾನುವಾರ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯಲ್ಲಿ ನಡೆದ ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ,ಶತಮಾನೋತ್ಸವ ಕಟ್ಟಡ ಲೋಕಾರ್ಪಣೆಗೊಳಿಸಿ ಅವರು ಆಶೀರ್ವಚನಗೈದರು.
   ಅಗಾಧ ಜ್ಞಾನ ಕಣಜದ ದಿ. ಖಂಡಿಗೆ ಶಾಮ ಭಟ್ಟರು ಸರಳ ವ್ಯಕ್ತಿತ್ವ, ಬಹುಮುಖಿ ಚಿಂತನೆಗಳ ಮೂಲಕ ಪ್ರಿನ್ಸಿಪಾಲ ಭಟ್ಟರೆಂದೇ ಖ್ಯಾತರಾಗಿದ್ದವರು. ಶ್ರೀಮಠದೊಂದಿಗೆ ನಿಕಟತೆಯಿದ್ದ ಅವರು ಮಠದ ಅಭಿಮಾನಿ ಶಿಷ್ಯರು ಎಂದು ಶ್ರೀಗಳು ತಿಳಿಸಿದರು. ವಿದ್ಯಾಭ್ಯಾಸ, ವಿದ್ಯಾರ್ಥಿಗಳ ಅಭ್ಯುತ್ತಾನಕ್ಕಾಗಿ ಬದುಕನ್ನು ಪೂರ್ಣ ಪ್ರಮಾಣದಲ್ಲಿ ಮೀಸಲಿಟ್ಟಿದ್ದ ಶಾಮ ಭಟ್ಟರು ಅಕ್ಷರ ಸಂತರಾಗಿ ಅನೇಕರ ಬಾಳಿಗೆ ಬೆಳಕಾಗಿದ್ದವರು. ಸಂಗೀತ ಕಲಾ ನಿಪುಣರಾಗಿ, ಸಮಾಜ ಸೇವೆ, ಸಹಕಾರಿ ರಂಗಗಳ ಪ್ರವರ್ಧಮಾನಕ್ಕೆ ಅಹರ್ನಿಶಿ ದುಡಿದಿದ್ದರು ಎಂದು ಶ್ರೀಗಳು ನೆನಪಿಸಿ ಗುಣಗಾನ ಮಾಡಿದರು.
   ಖಂಡಿಗೆ ಶಾಮ ಭಟ್ಟ ಜನ್ಮ ಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷ ಡಾ.ಕೆ.ಮಹಾಲಿಂಗ ಭಟ್ ಕಾನತ್ತಿಲ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾ ಸಂಪನ್ನತೆಯ ಮೇರು ಶಿಖರವಾಗಿದ್ದ ಖಂಡಿಗೆ ಶಾಮ ಭಟ್ಟರ ಅಪರಿಮಿತ ಕಾರ್ಯತತ್ಪರತೆಯ ಪರಿಣಾಮ ಒಂದು ಕಾಲದಲ್ಲಿ ಜನಸಾಮಾನ್ಯರಿಗೆ ಅರಿವಿನ ವಿಸ್ತಾರತೆಯ ಅಕ್ಷರ ಅರಿವಿನ ಸಾಧ್ಯತೆಗಳ ಹೆಬ್ಬಾಗಿಲು ತೆರೆಯಲ್ಪಟ್ಟದ್ದು ಈ ನಾಡಿನ ಮಹತ್ತರ ಅಂಶವಾಗಿ ಎಂದಿಗೂ ದಾಖಲೆಗೊಳ್ಳುವಂತದ್ದು ಎಂದು ತಿಳಿಸಿದರು. ಸ್ವಾತಂತ್ರ್ಯ ಹೋರಾಟ,ಕನ್ನಡ ಏಕೀಕರಣ, ಗಡಿನಾಡ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದ ಶಾಮ ಭಟ್ ಅವರ ಕಾರ್ಯವಿಸ್ತಾರತೆ ಇಂದು ಅಚ್ಚರಿಯನ್ನುಂಟುಮಾಡುತ್ತದೆ. ನಿಗರ್ವಿಯಾಗಿ, ನಿಖರ ಮಾತು, ನಡೆ-ನುಡಿಗಳಿಂದ ಪ್ರತಿಕೂಲತೆಗಳನ್ನು ಮೆಟ್ಟಿನಿಂತು ನಾಡಿಗೆ ಕೊಡುಗೆ ನೀಡಿರುವ ಬಹುಮುಖ ಆಯಾಮಯದ ಹಲವಾರು ವ್ಯವಸ್ಥೆಗಳು ಗಡಿನಾಡಿನ ಹೆಮ್ಮೆಯಾಗಿ ಇಂದು ನಮ್ಮನ್ನು ಬದುಕಲು ಪ್ರೇರೇಪಿಸುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
    ಕುಂಬಳೆ ಉಪಜಿಲ್ಲಾ ನಿವೃತ್ತ ವಿದ್ಯಾಧಿಕಾರಿ ಕೆ.ಕೈಲಾಸಮೂರ್ತಿ ಅವರು ಈ ಸಂದರ್ಭ ನಿವೃತ್ತ ಚಿತ್ರಕಲಾ ಶಿಕ್ಷಕ ಬಾಲ ಮಧುರಕಾನನ ಅವರು ಸಂಪಾದಿಸಿರುವ  ಶತಮಾನ ಪ್ರಭಾ ಚಿತ್ರ ಸಂಪುಟವನ್ನು ಅನಾವರಣಗೊಳಿಸಿದರು. ನಿವೃತ್ತ ಉಪಜಿಲ್ಲಾ ವಿದ್ಯಾಧಿಕಾರಿ, ಹಿರಿಯ ಭಾಷಾಂತರಕಾರ ಎ.ನರಸಿಂಹ ಭಟ್ ಹಾಗೂ ನಿವೃತ್ತ ಸಂಸ್ಕøತ ಶಿಕ್ಷಕ ರಾಜಗೋಪಾಲ ಪುಣಿಚಿತ್ತಾಯ ಪುಂಡೂರು ಅವರನ್ನು ಈ ಸಂದರ್ಭ ಸನ್ಮಾನಿಸಿ ಗೌರವಿಸಲಾಯಿತು. ಹಿರಿಯ ನ್ಯಾಯವಾದಿ ಐ.ವಿ.ಭಟ್ ಸಂಸ್ಮರಣಾ ಭಾಷಣಗೈದರು. ಮಹಾಜನ ವಿದ್ಯಾಸಂಸ್ಥೆಗಳ ಅಧ್ಯಕ್ಷ ಡಾ.ಕೆ.ಸುಬ್ರಹ್ಮಣ್ಯ ಭಟ್ ಸ್ವಾಗತಿಸಿ, ಹೈಸ್ಕೂಲಿನ ಮುಖ್ಯೋಪಾಧ್ಯಾಯ ಸಿ.ಎಚ್.ವೆಂಕಟರಾಜ ವಂದಿಸಿದರು. ವಿದ್ಯಾಸಂಸ್ಥೆಗಳ ಪ್ರಬಂಧಕ ಜಯದೇವ ಖಂಡಿಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.ಶಿಕ್ಷಕ ನಂದಕುಮಾರ್. ಕೆ. ಕಾರ್ಯಕ್ರಮ ನಿರೂಪಿಸಿದರು. 
    ಬಳಿಕ ಆರಾಧನಾ ಸಂಗೀತ ವಿದ್ಯಾಲಯ ನೀರ್ಚಾಲಿನ ವಿದ್ಯಾರ್ಥಿಗಳಾದ ಡಾ.ಹೇಮಶ್ರೀ, ಶ್ರೀವಾಣಿ ಕಾಕುಂಜೆ ಹಾಗೂ ರಮ್ಯಶ್ರೀ ಅಂಬಕಾನ ಅವರಿಂದ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಿತು. ಪಕ್ಕವಾದ್ಯಗಳಲ್ಲಿ ವಿದ್ವಾನ್ ಪ್ರಭಾಕರ ಕುಂಜಾರು(ವಯೋಲಿನ್), ಅಕ್ಷರ ಬೆದ್ರಡಿ ಕಲ್ಲಕಟ್ಟ(ಮೃದಂಗ)ದಲ್ಲಿ ಸಹಕರಿಸಿದರು. ಶಿಕ್ಷಕಿ ಶೈಲಜಾ ಬಿ.ಸ್ವಾಗತಿಸಿ, ವಾಣಿ ಪಿ.ಎಸ್.ವಂದಿಸಿದರು. ಶತಮಾನೋತ್ಸವದ ಅಂಗವಾಗಿ ದಿ. ಖಂಡಿಗೆ ಶಾಮ ಭಟ್ ಅವರ ಬದುಕು, ಸೇವೆಗಳನ್ನಾಧರಿಸಿದ ಚಿತ್ರ ಸಂಪುಟದ ವೀಡಿಯೋ ಪ್ರದರ್ಶನ ಗಮನ ಸೆಳೆಯಿತು. ಶಿಕ್ಷಕರಾದ ಅವಿನಾಶ ಕಾರಂತ, ರವಿಶಂಕರ ದೊಡ್ಡಮಾಣಿ, ವಿಶ್ವನಾಥ ಭಟ್ ಸಂಯೋಜಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries