ಬದಿಯಡ್ಕ: ಯಕ್ಷಗಾನ ಕ್ಷೇತ್ರದ ಪೂರ್ವ ಪರಂಪರೆಯನ್ನು ಸರಿಯಾದ ಕ್ರಮದಲ್ಲಿ ಅರ್ಥೈಸುವುದು ಇಂದಿನ ತುರ್ತು ಅಗತ್ಯವಾಗಿದೆ. ಆಧುನಿಕ ಸವಾಲುಗಳ ಮಧ್ಯೆ ಪರಂಪರೆಯನ್ನು ಉಳಿಸಲು ತುಮುಲದ ಹಾದಿಯ ಬದಲಿಗೆ ಸಾಗಿಬಂದ ಹಿರಿಯ ತಲೆಮಾರನ್ನು ಅನುಸರಿಸುವುದು ಸೂಕ್ತ ಎಂದು ಹಿರಿಯ ಯಕ್ಷಗಾನ ಕಲಾವಿದ ಉಬರಡ್ಕ ಉಮೇಶ ಶೆಟ್ಟಿ ಅವರು ತಿಳಿಸಿದರು.
ನೀರ್ಚಾಲು ಸಮೀಪದ ಕೊಲ್ಲಂಗಾನ ಶ್ರೀನಿಲಯ ಶ್ರೀದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ಭಾನುವಾರದಿಂದ ಆರಂಭಗೊಂಡ ವಾರ್ಷಿಕ ನವರಾತ್ರಿ ಮಹೋತ್ಸವದ ಅಂಗವಾಗಿ ಕೊಲ್ಲಂಗಾನದ ಶ್ರೀಸುಬ್ರಹ್ಮಣ್ಯ ಯಕ್ಷಗಾನ ಕಲಾಸಂಘದ 31ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿರುವ ಯಕ್ಷ ದಶ ವೈಭವ ಕಾರ್ಯಕ್ರಮವನ್ನು ಸಂಜೆ ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಕರಾವಳಿಯ ಶ್ರೀಮಂತ ಸಾಂಸ್ಕøತಿಕ ಪರಂಪರೆಯ ದ್ಯೋತಕವಾದ ಯಕ್ಷಗಾನಕ್ಕೆ ಶ್ರೀಕ್ಷೇತ್ರ ಕೊಲ್ಲಂಗಾನ ಮುಕುಟಪ್ರಾಯವಾಗಿ ಹಲವು ದಶಕಗಳಿಂದ ಮುಂಚೂಣಿಯಲ್ಲಿದೆ. ಸಂಪನ್ಮೂಲಗಳ ಜಟಿಲತೆಯ ಮಧ್ಯೆ ಕಲೆಯ ಬಗೆಗಿನ ಪ್ರೇಮ ಆಂತರಂಗಿಕವಾಗಿ ಇಲ್ಲಿ ವ್ಯವಸ್ಥೆಗೊಂಡಿದೆ. ಆರಾಧನೆ ಭಾಗವಾಗಿ ಯಕ್ಷಗಾನಕ್ಕೆ ಲಭ್ಯವಾಗಿರುವ ಇಂತಹ ಅವಕಾಶವನ್ನು ಮುಂದುವರಿಸುತ್ತಿರುವ ಸಂಘಟಕರ ಶ್ರಮ ಶ್ಲಾಘನೀಯ ಎಂದು ಅವರು ಈ ಸಂದರ್ಭ ತಿಳಿಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಬ್ರಹ್ಮಶ್ರೀ ಗಣಾಧಿರಾಜ ಉಪಾಧ್ಯಾಯ ಕೊಲ್ಲಂಗಾನ ಅವರು ಆಶೀರ್ವಚನಗೈದು ಮಾತನಾಡಿ, ಕಲಾರಾಧನೆಯಿಂದ ಅತುಲ್ಯವಾದ ತೃಪ್ತಿ ವ್ಯಕ್ತಿಯನ್ನು ಶಕ್ತಿಯಾಗಿಸುತ್ತದೆ; ಸಮಾಜವನ್ನು ಒಗ್ಗಟ್ಟಿನಿಂದ ಮುನ್ನಡೆಸುತ್ತದೆ. ಪುರಾಣ, ಶಾಸ್ತ್ರಗಳ ಅರಿವನ್ನು ಮೂಡಿಸಲು ಇಂದು ವ್ಯವಸ್ಥೆಗಳು ಇಲ್ಲದ ಹಂತದಲ್ಲಿ ಯಕ್ಷಗಾನ ಆ ಕೊರತೆಯನ್ನು ಸಮರ್ಥವಾಗಿ ನಿಭಾಯಿಸಿದೆ ಎಂದು ತಿಳಿಸಿದರು.
ಬಾಗಲಕೋಟೆಯ ಶ್ರೀವರದಹಸ್ತ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಾಘವೇಂದ್ರ ಪತ್ತೇಫೂರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕರಾವಳಿಯ ದೈವೀಕಲೆಯಾಗಿ ಇಂದು ವಿಶ್ವಮಾನ್ಯತೆ ಹೊಂದಿರುವ ಯಕ್ಷಗಾನ ಅಪೂರ್ವ ಕಲಾ ಪ್ರಕಾರವಾಗಿ ಹೆಚ್ಚು ಜನಮನ್ನಣೆ ಗಳಿಸಿರುವುದು ಕಲಾ ಶ್ರೀಮಂತಿಕೆಯ ಸಾಕ್ಷಿ. ನವರಾತ್ರಿಯ ಆಧ್ಯಾತ್ಮಿಕ ಮೌಲ್ಯಗಳನ್ನು ಗ್ರಹಿಸುವಲ್ಲಿ ಯಕ್ಷಗಾನದಂತಹ ಮಣ್ಣಿನ ಪರಂಪರೆಯ ದ್ಯೋತಕಗಳು ನಮಗೆ ಲಭ್ಯವಾಗಿರುವುದು ಹೆಮ್ಮೆ ಎಂದು ತಿಳಿಸಿದರು.
ಶಿವಮೊಗ್ಗದ ಅಬಕಾರಿ ನಿರೀಕ್ಷಕ ಡಿ.ಎನ್.ಹನುಮಂತಪ್ಪ, ಉದ್ಯಮಿ ಚೇತನ್ ಕುಮಾರ್ ಶಿವಮೊಗ್ಗ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಜ್ಯೋತಿಷ್ಯರತ್ನ ಪೆರಿಯ ಕಲ್ಯೋಟ್ ಕುಂಞÂಂಬು ನಾಯರ್, ಜ್ಯೋತಿಷ್ಯರತ್ನ ಕೋಡೋತ್ ಸದಾನಂದ ನಾಯರ್ ಹಾಗೂ ಬದಿಯಡ್ಕ ಗ್ರಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಶಾಮಪ್ರಸಾದ್ ಮಾನ್ಯ ಉಪಸ್ಥಿತರಿದ್ದು ಶುಭಹಾರೈಸಿದರು. ಈ ಸಂದರ್ಭ ಯಕ್ಷಗಾನ ಗುರು ಶ್ರೀಧರ ಐತಾಳ್ ಪಣಂಬೂರು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶರಣ್ಯಾ ಎಸ್.ಭಟ್ ಕೊಲ್ಲಂಗಾನ ಸ್ವಾಗತಿಸಿ, ಕು.ದೀಕ್ಷಾ ಶ್ರೀನಿಲಯ ವಂದಿಸಿದರು. ಭಾಗವತ ಸತೀಶ ಪುಣಿಚಿತ್ತಾಯ ಪೆರ್ಲ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ರಾಜ್ಯ ಪ್ರಶಸ್ತಿ ವಿಜೇತೆ ಜಯಶ್ರೀ ಟೀಚರ್ ಅವರ ನೇತೃತ್ವದ ಯಕ್ಷಚಿಣ್ಣರು ಅಂಗನವಾಡಿ ಪುಟಾಣಿ ಯಕ್ಷಗಾನ ತಂಡದವರಿಂದ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ಸಭಾ ಕಾರ್ಯಕ್ರಮದ ಮೊದಲು ನಾಟ್ಯಗುರು ಪಡುಮಲೆ ಜಯರಾಮ ಪಾಟಾಳಿ ರಚಿಸಿ ನಿರ್ದೇಶಿಸಿರುವ ರಾಷ್ಟ್ರ ಚರಿತ್ರೆ ಆಧಾರಿತ ಜೈ ಭಾರತಾಂಬ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ರಾತ್ರಿ 10 ರಿಂದ 12ರ ವರೆಗೆ ಯಕ್ಷಮಿತ್ರರು ಬದಿಯಡ್ಕ ತಂಡದವರಿಂದ ಮತ್ಸ್ಯಾವತಾರ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಶ್ರೀದೇವರ ಪ್ರತಿಷ್ಠೆ, ವಿವಿಧ ಪೂಜೆ, ಪಾರಾಯಣ, ರಾತ್ರಿ ಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು.