ಮಂಜೇಶ್ವರ: ಮಂಜೇಶ್ವರ ವಿಧಾನಸಭಾ ಕೇತ್ರಕ್ಕೆ ಅ.21 ರಂದು ನಡೆಯಲಿರುವ ಉಪಚುನಾವಣೆಯ ಹಿನ್ನೆಲೆಯಲ್ಲಿ ಸ್ಪರ್ಧಿಸುವ ಬಿಜೆಪಿ, ಸಿಪಿಎಂ, ಮುಸ್ಲಿಂ ಲೀಗ್ ಅಭ್ಯರ್ಥಿಗಳು ಸೋಮವಾರ ನಾಮಪತ್ರ ಸಲ್ಲಿಸಿದರು. ಬಿಜೆಪಿ ಅಭ್ಯರ್ಥಿ ರವೀಶ ತಂತ್ರಿ ಕುಂಟಾರು, ಸಿಪಿಎಂ ಅಭ್ಯರ್ಥಿ ಎಂ.ಶಂಕರ ರೈ ಮತ್ತು ಮುಸ್ಲಿಂ ಲೀಗ್‍ನ ಎಂ.ಸಿ.ಖಮರುದ್ದೀನ್ ನಾಮಪತ್ರ ಸಲ್ಲಿಸಿದ್ದಾರೆ.
ಜಿದ್ದಾಜಿದ್ದಿನ ತ್ರಿಕೋನ ಸ್ಪರ್ಧೆ ನಡೆಯಲಿರುವ ಮಂಜೇಶ್ವರ ವಿಧಾನಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿ ರವೀಶ ತಂತ್ರಿ ಕುಂಟಾರು ಮತ್ತು ಸಿಪಿಎಂ ಅಭ್ಯರ್ಥಿ ಎಂ.ಶಂಕರ ರೈ ಅವರು ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯಲ್ಲೂ, ಮುಸ್ಲಿಂ ಲೀಗ್ ಅಭ್ಯರ್ಥಿ ಎಂ.ಸಿ.ಖಮರುದ್ದೀನ್ ಮಂಜೇಶ್ವರ ಬಿಡಿಒ ಕಚೇರಿಯಲ್ಲೂ ನಾಮಪತ್ರ ಸಲ್ಲಿಸಿದರು.
ಬಿ.ಸಿ.ರೋಡ್ ಪರಿಸರದಿಂದ ಮೆರವಣಿಗೆಯಲ್ಲಿ ಸಾಗಿ ಬಿಜೆಪಿ ಅಭ್ಯರ್ಥಿ ರವೀಶ ತಂತ್ರಿ ಕುಂಟಾರು ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಪಿ.ಕೆ.ಕೃಷ್ಣದಾಸ್, ನ್ಯಾಯವಾದಿ ಕೆ.ಶ್ರೀಕಾಂತ್, ನ್ಯಾಯವಾದಿ ವಿ.ಬಾಲಕೃಷ್ಣ ಶೆಟ್ಟಿ, ಕೋಳಾರು ಸತೀಶ್ಚಂದ್ರ ಭಂಡಾರಿ, ಸುರೇಶ್ ಶೆಟ್ಟಿ, ಸಂಜೀವ ಶೆಟ್ಟಿ, ರಮೇಶ್ ಪಿ, ಮಣಿಕಂಠ ರೈ, ನ್ಯಾಯವಾದಿ ಸದಾನಂದ ರೈ ಮೊದಲಾದವರಿದ್ದರು.
ಸಿಪಿಎಂ ಜಿಲ್ಲಾ ಸಮಿತಿ ಕಚೇರಿಯಿಂದ ಸಿಪಿಎಂ ಅಭ್ಯರ್ಥಿ ಶಂಕರ ರೈ ಅವರು ಮೆರವಣಿಗೆಯಲ್ಲಿ ಸಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಎಂ.ವಿ.ಬಾಲಕೃಷ್ಣನ್, ನೇತಾರರಾದ ಪಿ.ಕರುಣಾಕರನ್, ಪಿ.ಕೆ.ಶ್ರೀಮತಿ, ಗೋವಿಂದನ್ ಪಳ್ಳಿಕಾಪ್ಪಿಲ್, ಟಿ.ಕೃಷ್ಣನ್ ಮೊದಲಾದವರಿದ್ದರು.
ಮುಸ್ಲಿಂ ಲೀಗ್ ಅಭ್ಯರ್ಥಿ ಎಂ.ಸಿ.ಖಮರುದ್ದೀನ್ ಉಪ್ಪಳದ ಐಕ್ಯರಂಗ ಚುನಾವಣಾ ಸಮಿತಿ ಕಚೇರಿಯಿಂದ ಮೆರವಣಿಗೆಯಲ್ಲಿ ಸಾಗಿ ಮಂಜೇಶ್ವರ ಬಿಡಿಒ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್, ಹಕೀಂ ಕುನ್ನಿಲ್, ಕೆ.ನೀಲಕಂಠನ್, ಎ.ಕೆ.ಎಂ.ಅಶ್ರಫ್, ಸುಬ್ಬಯ್ಯ ರೈ ಮೊದಲಾದವರಿದ್ದರು.