ನವದೆಹಲಿ: ದೇಶದ ಆರ್ಥಿಕ ಕುಸಿತಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದ ಕೆಟ್ಟ ನಿರ್ವಹಣೆಯೇ ಕಾರಣ ಎಂದು ಮಾಜಿ ಪ್ರಧಾನಮಂತ್ರಿ ಡಾ.ಮನಮೋಹನ್ ಸಿಂಗ್ ಅವರು ವಾಗ್ದಾಳಿ ನಡೆಸಿದ್ದಾರೆ.
ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಅವರು, ದೇಶದಲ್ಲಿ ತಾಂಡವವಾಡುತ್ತಿರುವ ಆರ್ಥಿಕ ಕುಸಿತಕ್ಕೆ ಮೋದಿ ಸರ್ಕಾರದ ಸವಾರ್ಂಗೀಣ ಕಳಪೆ ನಿರ್ವಹಣೆಯೇ ಕಾರಣವಾಗಿದೆ. ಕೇಂದ್ರ ಸರ್ಕಾರ ಎಲ್ಲಾ ರಾಜಕೀಯ ಹಗೆತನವನ್ನು ಬದಿಗಿಟ್ಟು ಮನುಷ್ಯ ನಿರ್ಮಿತ ಈ ಬಿಕ್ಕಟ್ಟಿನಿಂದ ಹೊರಬರುವ ಪ್ರಯತ್ನಗಳನ್ನು ಮಾಡಬೇಕಿದೆ ಎಂದು ಹೇಳಿದ್ದಾರೆ.
ದೇಶದ ಇಂದಿನ ಆರ್ಥಿಕ ಸ್ಥಿತಿಗತಿ ತೀವ್ರ ಚಿಂತಾಜನಕ ಸ್ಥಿತಿಯನ್ನು ತಲುಪಿದೆ. ಕಡೆಯ ತ್ರೈಮಾಸಿಕ ಜಿಡಿಪಿ ಬೆಳವಣಿಗೆಯ ದರ ಶೇ.5 ರಷ್ಟಕ್ಕೆ ಕುಸಿದಿರುವುದು ನಾವು ದೀರ್ಘಕಾಲದ ನಿಧಾನಗತಿಯ ಮಧ್ಯದಲ್ಲಿದ್ದೇವೆಂಬುದನ್ನು ಸೂಚಿಸುತ್ತಿದೆ. ಭಾರತ ಹೆಚ್ಚು ವೇಗವಾಗಿ ಬೆಳೆಯುವಂತಹ ಸಾಮಥ್ರ್ಯವನ್ನು ಹೊಂದಿದೆ. ಆದರೆ, ಮೋದಿ ಸರ್ಕಾರದ ಕಳಪೆ ನಿರ್ವಹಣೆ ಆರ್ಥಿಕ ಹಿಂಜರಿತಕ್ಕೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.